ಸೋಮವಾರಪೇಟೆಯಲ್ಲಿ ಎನ್‌ಐಎ ಅಧಿಕಾರಿಗಳಿಂದ ಶೋಧ

5spt1
ಸೋಮವಾರಪೇಟೆ ಪೊಲೀಸ್ ಮುಂದೆ ಎನ್‌ಐಎ ಅಧಿಕಾರಿಗಳ ತಂಡ ನಿಂತಿರುವುದು.
Published on

ಸೋಮವಾರಪೇಟೆ : ಬಿಜೆಪಿ ಯುವ ಮೋರ್ಚಾ ಮುಖಂಡ ಬೆಳ್ಳಾರೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಸೋಮವಾರಪೇಟೆ ತಾಲೂಕಿನ 3 ಕಡೆ ಬೆಳಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಅಧಿಕಾರಿಗಳ ತಂಡ ಎರಡನೇ ಬಾರಿಗೆ ಕೊಲೆ ಆರೋಪಿಗಳ ಮನೆಗಳಲ್ಲಿ ಶೋಧ ನಡೆಸಿದೆ.

ಚೌಡ್ಲು ಗ್ರಾಮದ ತೌಶಿಕ್, ತಣ್ಣೀರುಹಳ್ಳ ಗ್ರಾಮದ ನೌಷದ್, ಕಲ್ಲಂದೂರು ಗ್ರಾಮದ ಅಬ್ದುಲ್ ರೆಹಮಾನ್ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಆರೋಪಿಗಳ ಮನೆಯವರ ಮೊಬೈಲ್‌ಗಳನ್ನು ಪರಿಶೀಲಿಸಿ, ಸಿಮ್ ಕಾರ್ಡ್ ಹಾಗೂ ಬ್ಯಾಂಕ್ ಖಾತಾ ಪುಸ್ತಕಗಳನ್ನು ಪಡೆದುಕೊಂಡು, ತೀವ್ರ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಕಂದಾಯ ಅಧಿಕಾರಿಗಳ ಸಮಕ್ಷಮ ಮಹಜರು ನಡೆಸಿ, ಸಹಿ ಪಡೆದುಕೊಂಡಿದ್ದಾರೆ.

ಹೊಸತೋಟ ಗ್ರಾಮದ ನಿವಾಸಿ, ಇದೀಗ ಸೋಮವಾರಪೇಟೆ ಪಟ್ಟಣದಲ್ಲಿ ವಾಸವಿರುವ ಜುನೈದ್ ಅವರ ಮನೆಗೆ ಮೊದಲ ಬಾರಿಗೆ ತೆರಳಿದ ತಂಡ ವಿಚಾರಣೆ ನಡೆಸಿದ್ದು, ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲೆ ಪ್ರಕರಣದ ಮೂವರು ಅರೋಪಿಗಳು ಈ ಹಿಂದೆಯೇ ತಲೆಮರೆಸಿಕೊಂಡಿದ್ದಾರೆ. ಎರಡನೇ ಬಾರಿಗೆ ಐಎನ್‌ಎ ಅಧಿಕಾರಿಗಳು ಆರೋಪಿಗಳ ಮನೆಗೆ ಬಂದು ಮಾಹಿತಿ ಕಲೆ ಹಾಕಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು 2022ರ ಜು.26ರಂದು ರಾತ್ರಿ 8 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು. ಆರಂಭದಲ್ಲಿ ಪೊಲೀಸ್ ಇಲಾಖೆ ವಿಶೇಷ ತಂಡಗಳನ್ನು ರಚಿಸಿತ್ತು. ನಂತರ ಎನ್‌ಐಎಗೆ ಪ್ರಕರಣ ವಹಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ 19 ಆರೋಪಿಗಳ ಬಂಧನವಾಗಿದ್ದು, ಅನೇಕರು ತಲೆಮರೆಸಿಕೊಂಡಿದ್ದಾರೆ. ಅದರಲ್ಲಿ ಸೋಮವಾರಪೇಟೆಯ ಮೂವರು ಆರೋಪಿಗಳು ಸೇರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net