

ಮೈಸೂರು: ದೇಶಾದ್ಯಂತ ಎಸ್‌ಡಿಪಿಐ, ಪಿಎಫ್‌ಐ ನಾಯಕರ ಮನೆ, ಕಚೇರಿಯ ಮನೆ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿ ಗಳು ದಾಳಿ ನಡೆಸಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಬೆಳ್ಳಂಬೆಳಗೆ ದಾಳಿ ನಡೆಸಿ ಪಿಎಫ್‌ಐ ಮುಖಂಡರೊಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಶಾಂತಿ ನಗರದಲ್ಲಿರುವ ಪಿಎಫ್‌ಐ ಮಾಜಿ ಜಿಲ್ಲಾಧ್ಯಕ್ಷ ಮೌಲಾನ ಮಹಮ್ಮದ್ ಕಲಿಮುಲ್ಲ ಮನೆಗೆ ಮುಂಜಾನೆ 3.30ರ ವೇಳೆಯಲ್ಲಿ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದರು. ನಂತರ ಬೆಳಗ್ಗೆ 6ರವರೆಗೆ ಮನೆಯಲ್ಲಿಯೇ ವಿಚಾರಣೆ ನಡೆಸಿದ ಅಧಿಕಾರಿಗಳು ಬಳಿಕ ನಗರದ ಸಿಸಿಬಿ ಕಚೇರಿಗೆ ಕರೆದೊಯ್ದು ಅಲ್ಲಿ ಎರಡು ಗಂಟೆಗಳ ವಿಚಾರಣೆ ನಡೆಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಮುಂಜಾನೆ 3.30ರ ವೇಳೆಯಲ್ಲಿ ಮನೆಗೆ ಬಂದ ಎನ್‌ಐಎ ಅಧಿಕಾರಿಗಳು ಲ್ಯಾಪ್‌ಟಾಪ್, ಮೊಬೈಲ್ ಮತ್ತು ಮದ್ರಾಸ ಪುಸ್ತಕಗಳನ್ನು ಪರಿಶೀಲಿಸಿದರು. ಅಲ್ಲದೆ ಮಕ್ಕಳ ಆಟದ ಸಾಮಗ್ರಿಗಳನ್ನು ಸಹ ಪರಿಶೀಲಿಸಿದ್ದಾರೆ. ದಾಳಿಯ ಸಂದರ್ಭ ಕಲಿಮುಲ್ಲ ಮನೆಯಿಂದ ಕೆಲವು ದಾಖಲೆಗಳನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಕಲಿಮುಲ್ಲ ಅವರನ್ನು ವಶಕ್ಕೆ ಪಡೆದು ನಗರದ ಸಂತ ಫಿಲೋಮಿನಾ ಚರ್ಚ್ ಬಳಿ ಇರುವ ಸಿಸಿಬಿ ಕಚೇರಿಗೆ ಕರೆ ತರಲಾಯಿತು. ಈ ವಿಚಾರ ತಿಳಿಯುತ್ತಿದ್ದಂತೆಯೇ ಪಿಎಫ್‌ಐ ಕಾರ್ಯಕರ್ತರು ಸಿಸಿಬಿ ಕಚೇರಿ ಎದುರು ಜಮಾಯಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಕಚೇರಿಯ ಗೇಟ್ ಬಳಿಯಲ್ಲಿ ಪಿಎಫ್‌ಐ ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ಸಂದಭ ಎನ್‌ಐಎ ಗೋ ಬ್ಯಾಕ್ ಎಂದು ಘೋಷಣೆ ಕೂಗುತ್ತಾ ಪಿಎಫ್‌ಐ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು.