ಗಂಗಾವಳಿ ನದಿಯ ಮಣ್ಣು ತೆಗೆಯುವ ಜವಾಬ್ದಾರಿ ಎನ್ಎಚ್‌ಎಐಗೆ

Shirur Land slide update
Published on

ಕಾರವಾರ: ಅಂಕೋಲಾ ಶಿರೂರು ಗುಡ್ಡ ಕುಸಿತದ ಪರಿಣಾಮ ಗಂಗಾವಳಿಯಲ್ಲಿ ಬಿದ್ದ ಮಣ್ಣು ತೆರವು ಮಾಡುವ ಜವಾಬ್ದಾರಿಯನ್ನು ರಾಷ್ಟ್ರೀಯ ಗಂಹೆದ್ದಾರಿ ಪ್ರಾಽಕಾರ (ಎನ್‌ಎಚ್‌ಎಐ)ಕ್ಕೆ ವಹಿಸಲಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪ್ರಾಧಿಕಾರದ ಅಽಕಾರಿಗಳು ನದಿಯಲ್ಲಿ ಬಿದ್ದ ಮಣ್ಣು ತೆರವು ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಅದರಂತೆ ಶೀಘ್ರ ಕಾಮಗಾರಿ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಸಭೆ ನಡೆಸಿ, ಪ್ರಾಽಕಾರದ ಹೊನ್ನಾವರದ ಯೋಜನಾ ನಿರ್ದೇಶಕ ಶಿವಕುಮಾರ್ ಅವರಿಗೆ ಸೂಚನೆ ನೀಡಿದರು. ಮಳೆಗಾಲ ಸಮೀಪಿಸುತ್ತಿದ್ದು, ಒಂದು ವಾರದ ಒಳಗೆ ಎಲ್ಲ ಅಗತ್ಯ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ಪಡೆದು ತಕ್ಷಣ ಮಣ್ಣು ತೆರವು ಕಾರ್ಯ ಆರಂಭಿಸಿ, ನಿಗತ ಅವಧಿಯೊಳಗೆ ಕಾಮಗಾರಿಯನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಬೇಕು ಎಂದು ಸೂಚನೆ ನೀಡಿದರು. ನದಿಯಿಂದ ತೆರವುಗೊಳಿಸುವ ಮಣ್ಣನ್ನು ನಿಯಮಾವಳಿಯಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಆಶಾ ಅವರಿಗೆ ಸೂಚನೆ ನೀಡಿದರು. ತೆರವು ಕಾರ್ಯಚರಣೆಗೆ ಬರುವ ಬಾರ್ಜ್ಗಳ ಓಡಾಟಕ್ಕೆ ಎಲ್ಲ ರೀತಿಯ ಅಗತ್ಯ ಸಹಕಾರ ನೀಡುವಂತೆ ಬಂದರು ಅಧಿಕಾರಿ ಕ್ಯಾಪ್ಟನ್ ಸಿ. ಸ್ವಾಮಿ ಅವರಿಗೆ ಸೂಚನೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಎಎಸ್‌ಪಿ ಜಗದೀಶ್, ಜಿಪಂ ಮುಖ್ಯ ಲೆಕ್ಕಾಕಾರಿ ಆನಂದ್‌ಸಾ ಹಬೀಬ್, ಬಂದರು ಇಲಾಖೆಯ ನಿರ್ದೇಶಕ ಕ್ಯಾ.ಸ್ವಾಮಿ, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿಬಿನ್ ಬೋಪಣ್ಣ ಇದ್ದರು.

ಹಿನ್ನೆಲೆ

2024 ರ ಜುಲೈ 16 ರಂದು ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗುಡ್ಡ ಕುಸಿದು ಹೆದ್ದಾರಿ ಸಂಚಾರ ಬಂದಾಗಿತ್ತು. ಮಾತ್ರವಲ್ಲದೇ ನೂರಾರು ಲೋಡ್‌ಗಳಷ್ಟು ಗುಡ್ಡದ ಮಣ್ಣು ಗಂಗಾವಳಿ ನದಿಯಲ್ಲಿ ಬಿದ್ದಿತ್ತು. ಇದರಿಂದ ನದಿ ನಡುವೆ ದ್ವೀಪವೇ ಸೃಷ್ಟಿಯಾಗಿತ್ತು. ಆ ಮಣ್ಣು ತೆರವು ಮಾಡದೇ ಇದ್ದಲ್ಲಿ ಈ ಮಳೆಗಾಲದಲ್ಲಿ ಶಿರೂರಿನ ಹಿಂದಿನ ಊರುಗಳಲ್ಲಿ ನೆರೆಯ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇತ್ತು. ಮಾತ್ರವಲ್ಲದೇ ನದಿಯ ನೀರು ಪಕ್ಕದ ಉಳುವರೆ ಗ್ರಾಮವನ್ನು ಕೊಚ್ಚಿಕೊಂಡು ಹೋಗುವ ಅಪಾಯವಿತ್ತು.

ಶಿರೂರು ದುರಂತದಲ್ಲಿ ಅಂಕೋಲಾ ಉಳುವರೆ ಗ್ರಾಮದಲ್ಲಿ ಗಂಗಾವಳಿ ನದಿ ದಂಡೆಗೆ ಕಟ್ಟಿದ್ದ ಪಿಚ್ಚಿಂಗ್ ಕುಸಿದಿದ್ದು, ಅದರ ದುರಸ್ತಿಯ ಜವಾಬ್ದಾರಿಯನ್ನು ಸಣ್ಣ ನೀರಾವರಿ ಇಲಾಖೆಗೆ ನೀಡಲಾಗಿದೆ. ಕೆ.ಲಕ್ಷ್ಮೀಪ್ರಿಯಾ  ಜಿಲ್ಲಾಧಿಕಾರಿ ಉತ್ತರ ಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net