

ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ
ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿಯಲ್ಲಿ ಚತುಷ್ಪಥ ಕಾಮಗಾರಿ ಆರಂಭಗೊಂಡು ಎರಡು ವರ್ಷ ಸಂದಿದೆ. ಆರಂಭದ ದಿನಗಳಿಂದಲೂ ಆಮೆಗತಿಯಲ್ಲಿಯೇ ಸಾಗುತ್ತಿದ್ದ ಕಾಮಗಾರಿಗೆ ನೆಲ್ಯಾಡಿ ಜನತೆ ಬೇಸತ್ತು ಹೋಗಿದ್ದಾರೆ.
ಚತುಷ್ಪಥ ಕಾಮಗಾರಿ ಹಿನ್ನೆಲೆ ಎತ್ತರಿಸಲ್ಪಟ್ಟ ರಸ್ತೆಯನ್ನು ತೆಗೆದು ಕಲ್ಲಡ್ಕ ಮಾದರಿಯಲ್ಲಿ ಬೃಹತ್ ಪಿಲ್ಲರ್ಗಳ ಮೂಲಕ ರಸ್ತೆ ಎತ್ತರಿಸುವಂತೆ ಹೋರಾಟಗಳು ನಡೆಯುತ್ತಲೇ ಇವೆ. ಇದಕ್ಕೆ ಪೂರಕವೆಂಬಂತೆ ನೆಲ್ಯಾಡಿಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.
ಅರ್ಧಂಬರ್ಧ ಕಾಮಗಾರಿಯಿಂದ ಮಳೆಗಾಲದಲ್ಲಿ ಅವ್ಯವಸ್ಥೆಯೇ ಹೆಚ್ಚಾಗಿದೆ. ಎತ್ತರಿಸಲ್ಪಟ್ಟ ಅಪೂರ್ಣ ರಸ್ತೆಯಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಮಣ್ಣು ಮತ್ತು ಮಳೆಯ ನೀರು ಸರ್ವೀಸ್ ರಸ್ತೆಯನ್ನು ಸೇರುತ್ತಿದೆ. ಸರ್ವೀಸ್ ರಸ್ತೆ ಸಂಪೂರ್ಣ ಹೊಂಡಮಯವಾಗಿದ್ದು ನೆಲ್ಯಾಡಿ ಸೇರಿದಂತೆ ದೂರದ ಊರಿನಿಂದ ಬರುವ ವಾಹನ ಚಾಲಕರಿಗೂ ರಸ್ತೆ ನಡುವೆ ಇರುವ ಗುಂಡಿಯ ಆಳ ತಿಳಿಯದಂತಾಗಿ ಪ್ರತಿಕ್ಷಣವೂ ಅಪಾಯವನ್ನೇ ಎದುರು ಕಾಣುವಂತಾಗಿದೆ. ಸರ್ವೀಸ್ ರಸ್ತೆಯಲ್ಲಿ ತುಂಬಿಕೊಂಡ ನೀರು ಚರಂಡಿಯಲ್ಲಿ ಸುಗಮವಾಗಿ ಸಾಗದೆ ಸರ್ವೀಸ್ ರಸ್ತೆ ಕೆರೆಯಂತೆ ಕಾಣಲಾರಂಭಿಸುತ್ತದೆ. ಸರ್ವೀಸ್ ರಸ್ತೆಗಳಲ್ಲಿ ಭಾರಿ ವಾಹನಗಳು ತಿರುವು ಪಡೆಯಲಾಗದೆ ನೇರವಾಗಿ ಹೋಗುವುದಕಷ್ಟೆ ಅವಕಾಶವಿದೆ. ಸರ್ವೀಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಮಾಮೂಲಿ.
15 ವರ್ಷ ತಾಲೂಕು ಕೇಂದ್ರಕ್ಕಾಗಿ ಹೋರಾಟ ಮಾಡಿದ್ದ ನೆಲ್ಯಾಡಿ ಜನತೆ ಇಂದು ನೆಲ್ಯಾಡಿ ಪೇಟೆಯನ್ನು ಉಳಿಸುವ ಹೋರಾಟಕ್ಕೆ ಇಳಿಯುವ ಸ್ಥಿತಿ ಬಂದಿದೆ. ಈ ಬಗ್ಗೆ ಇಲಾಖೆಗೆ ಹಾಗೂ ಗುತ್ತಿಗೆದಾರರಿಗೆ ಮನವಿ ಸಲ್ಲಿಸಲಾಗಿದೆ. ದ.ಕ. ಸಂಸದ ಬ್ರಿಜೇಶ್ ಚೌಟರಿಗೂ ಮನವಿ ನೀಡಲಾಗಿದೆ. ತಾವು ಸೂಚನೆ ನೀಡುವವರೆಗೆ ನೆಲ್ಯಾಡಿಯಲ್ಲಿ ಕಾಮಗಾರಿ ಮುಂದುವರಿಸಬೇಡಿ ಎಂದು ಗುತ್ತಿಗೆದಾರರಿಗೆ ತಿಳಿಸಿದ್ದಾರೆ ಎಂದು ಸಮಿತಿ ಪತ್ರಿಕೆಗೆ ತಿಳಿಸಿದೆ.
ಈಗಾಗಲೇ ಎನ್ಎಚ್ಎಐ, ಗುತ್ತಿಗೆದಾರರು, ನೆಲ್ಯಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಸೇರಿ ಎರಡು ಯೋಜನಾ ನಕ್ಷೆಗಳನ್ನು ಸಿದ್ಧಪಡಿಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ನೀಡಲಾಗಿದೆ. ಯೋಜನಾ ನಕ್ಷೆಯಲ್ಲಿ ಕ್ರಮವಾಗಿ ಸಂತ ಜಾರ್ಜ್ ವಿದ್ಯಾಲಯದಿಂದ ಕೌಕ್ರಾಡಿ ಪಂಚಾಯಿತಿವರೆಗೆ ಕಲ್ಲಡ್ಕ ಪೇಟೆಯಲ್ಲಿ ಕಾಮಗಾರಿ ನಡೆಸಿದಂತೆಯೇ ರಸ್ತೆ ನಿರ್ಮಾಣ ಮಾಡಬೇಕು ಅಥವಾ ನೆಲ್ಯಾಡಿಯ ರಂಗಭಾರತಿ ಶಾಲೆಯ ಮುಂಭಾಗದಿಂದ ನೈನಾನ್ ಕಾಂಪ್ಲೆಕ್ಸ್ವರೆಗೆ ಕಲ್ಲಡ್ಕ ಮಾದರಿ ರಸ್ತೆ ನಿರ್ಮಿಸಿ ಕೊಡುವಂತೆ ತಿಳಿಸಲಾಗಿದೆ. ಕೇಂದ್ರ ಸಚಿವರು ಈ ಮನವಿ ತಿರಸ್ಕರಿಸಿದ್ದಾರೆ ಎಂದು ಗುತ್ತಿಗೆದಾರರು ಹಾಗೂ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳು ಮೌಖಿಕವಾಗಿ ಪೇಟೆ ಉಳಿಸಿ ಹೋರಾಟ ಸಮಿತಿಗೆ ತಿಳಿಸಿದ್ದಾರೆ. ಎರಡು ಯೋಜನಾ ನಕ್ಷೆಯ ಬದಲಾಗಿ ಅಲ್ಲಲ್ಲಿ ಹೆಚ್ಚುವರಿ ಅಂಡರ್ಪಾಸ್ಗಳನ್ನು ಮಾಡಿಕೊಡುವ ಭರವಸೆ ಗುತ್ತಿಗೆದಾರರು ನೀಡಿದ್ದಾರೆ. ಪಿಲ್ಲರ್ಗಳ ಮೂಲಕವೇ ರಸ್ತೆ ನಿರ್ಮಾಣ ಮಾಡಲು ಸಾಧ್ಯವಾಗದಿದ್ದಲ್ಲಿ ಸರ್ವೀಸ್ ರಸ್ತೆಯಂತೆ ಸಮತಟ್ಟಾದ ರಸ್ತೆಯನ್ನೇ ಮಾಡಿಕೊಡಲಿ ಎಂದು ಹೋರಾಟ ಸಮಿತಿ ಪಟ್ಟು ಹಿಡಿದಿದೆ.
ಪ್ರತಿ ಬಾರಿ ಸರ್ವೀಸ್ ರಸ್ತೆಗಳಲ್ಲಿ ಗುಂಡಿ ಬಿದ್ದಾಗ ಸ್ಥಳೀಯರು ಗುತ್ತಿಗೆದಾರರನ್ನು ಸಂಪರ್ಕಿಸಿದರೆ ಒಂದು ಲೋಡ್ ಜಲ್ಲಿ ತಂದು ಗುಂಡಿಗೆ ಸುರಿದು ತೇಪೆ ಹಚ್ಚುತ್ತಾರೆ. ವೇಗವಾಗಿ ಸಾಗುವ ವಾಹನಗಳಿಂದಾಗಿ ಎರಡೇ ದಿನದಲ್ಲಿ ಜಲ್ಲಿ ಚದುರಿ ಮತ್ತೆ ಮೊದಲಿನಂತೆ ರಸ್ತೆ ಹೊಂಡಮಯವಾಗುತ್ತದೆ. ನೆಲ್ಯಾಡಿಯ ಸರ್ವೀಸ್ ರಸ್ತೆಗಳಲ್ಲಿ 20 ಫೀಟ್ಗೆ ಒಂದರಂತೆ ಎತ್ತರಿಸಲ್ಪಟ್ಟ ರಸ್ತೆಯ ಗೋಡೆ ಬದಿಯಲ್ಲಿ ಎರಡು ಫೀಟ್ ಕಲ್ಲನ್ನು ಇಡಲಾಗಿದೆ. ಈ ಕಲ್ಲಿನಿಂದಲೇ ಕೆಲವೊಮ್ಮೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಅಲ್ಲದೆ ವಾಹನಗಳು ಚಲಿಸುವಾಗ ಹಲವು ಬಾರಿ ಗಮನಕ್ಕೆ ಬರದೆ ಅಪಘಾತವಾಗುವ ಸಂಭವವಿದೆ. ಪಾದಚಾರಿ ಪಥದ ಕೆಲವೆಡೆ ಬಾಯಿ ತೆರೆದ ಗುಂಡಿಗಳಿವೆ. ಆದರೆ ಸೂಚನಾ ಫಲಕಗಳಿಲ್ಲ.
ನೆಲ್ಯಾಡಿ ಭಾಗದ ಕಾಮಗಾರಿ ವೇಗವಾಗಿ ಪೂರ್ಣಗೊಳಿಸಬೇಕೆಂದುಕೊಂಡಿದ್ದೆವು. ಆದರೆ ಕಾರಣಾಂತರಗಳಿಂದ ಕಾಮಗಾರಿ ಮುಂದುವರಿಸಲಾಗಲಿಲ್ಲ. ಸಂಸದರ ಜತೆ ಮಾತುಕತೆಯ ನಂತರ ಕಾಮಗಾರಿ ಮುಂದುವರಿಯುವ ಭರವಸೆ ಇದೆ. ಸರ್ವೀಸ್ ರಸ್ತೆಯಲ್ಲಿ ಉಂಟಾದ ಹೊಂಡಗಳ ಬಗ್ಗೆ ಅರಿವಿದೆ. ಮಳೆ ತುಸು ಕಡಿಮೆಯಾದ ಕೂಡಲೇ ಹೊಂಡಗಳನ್ನು ಮುಚ್ಚುವಂತೆ ಗುತ್ತಿಗೆದಾರರಿಗೆ ತಿಳಿಸುತ್ತೇವೆ. ಅಲ್ಲಲ್ಲಿ ಎಚ್ಚರಿಕೆಯ ಫಲಕಗಳನ್ನು ಹಾಕುವಂತೆ ತಿಳಿಸುತ್ತೇವೆ. - ಅಬ್ದುಲ್ ಜಾವೇದ್ ಅಜ್ಮೀ, ಯೋಜನಾ ನಿರ್ದೇಶಕರು, ರಾ.ಹೆ ಪ್ರಾಧಿಕಾರ ಮಂಗಳೂರು ಜುಲೈ ಮೊದಲ ವಾರದಲ್ಲಿ ಸಂಸದರನ್ನು ಭೇಟಿಯಾಗಲಿದ್ದೇವೆ. ನೆಲ್ಯಾಡಿ ಪೇಟೆ ಉಳಿಸುವ ಅನಿವಾರ್ಯತೆ ಬಗ್ಗೆ ಸಂಸದರಿಗೆ ಮನವರಿಕೆ ಮಾಡಲಿದ್ದೇವೆ. ನೆಲ್ಯಾಡಿ ಪೇಟೆಯನ್ನು ಉಳಿಸಿ ಕಾಮಗಾರಿ ಮುಂದುವರಿಸುವ ಬಗ್ಗೆ ನಮ್ಮ ಹೋರಾಟ ಸಮಿತಿ ಒತ್ತಾಯಿಸಲಿದೆ. - ಸತೀಶ್ ಕೆ. ದುರ್ಗಾಶ್ರೀ, ನೆಲ್ಯಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಕೋಶಾಧಿಕಾರಿ https://www.vijayavani.net/dakshina-kannada-normal-rain-yellow-alart-continued https://www.vijayavani.net/homeocon-2024-speaker-u-t-kadar-inaguration-at-mangalore