ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಕೊಡಿಸಿದ ಗೃಹಸಚಿವ ಆರಗ ಜ್ಞಾನೇಂದ್ರ

28 HVR 8 A
Published on

ಹಾವೇರಿ: ಗೃಹ ಸಚಿವ ಆರಗ ಜ್ಞಾನೇಂದ್ರ ಶನಿವಾರ ಹುಬ್ಬಳ್ಳಿಯಿಂದ ಶಿವಮೊಗ್ಗಕ್ಕೆ ವಾಹನದ ಮೂಲಕ ಹೊರಟಿದ್ದ ಸಂದರ್ಭದಲ್ಲಿ ಬೆಳ್ಳಿಗಟ್ಟಿ ಕ್ರಾಸ್ ಬಳಿ ಬೈಕ್ ಮತ್ತು ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಆರು ಜನರನ್ನು ತಮ್ಮ ಬೆಂಗಾವಲು ವಾಹನದ ಮೂಲಕ ಆಸ್ಪತ್ರೆಗೆ ರವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು ಆರಗ ಜ್ಞಾನೇಂದ್ರ ಧಾರವಾಡ ಜಿಲ್ಲೆಗೆ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಸಂಜೆ ಹುಬ್ಬಳ್ಳಿಯಿಂದ ಹಾವೇರಿ ಕಡೆಗೆ ಹೊರಟಿದ್ದರು. ಈ ವೇಳೆ ಬೆಳ್ಳಿಗಟ್ಟಿ ಕ್ರಾಸ್ ಬಳಿ ಬೈಕ್‌ವೊಂದಕ್ಕೆ ಕಾರು ಡಿಕ್ಕಿ ಹೊಡೆದು ನಂತರ ಕಾರು ಪಲ್ಟಿಯಾಗಿದೆ.
ಅವಘಡದಲ್ಲಿ ಬೈಕ್‌ನಲ್ಲಿದ್ದ ಐವರು ಹಾಗೂ ಕಾರಿನಲ್ಲಿದ್ದ ಚಾಲಕ ಗಾಯಗೊಂಡು ನರಳಾಡುತ್ತಿದ್ದರು. ಇದೇ ಮಾರ್ಗದಲ್ಲಿ ಬರುತ್ತಿದ್ದ ಗೃಹಸಚಿವರು ಕಾರು ನಿಲ್ಲಿಸಿ ಬೆಂಗಾವಲು ಪಡೆಯ ಸಿಬ್ಬಂದಿ ಸಹಾಯದಿಂದ ಗಾಯಾಳುಗಳನ್ನು ಸಂತೈಸಿ, ಕೂಡಲೇ ಶಿಗ್ಗಾಂವಿ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ಬೈಕ್‌ನಲ್ಲಿ ಐವರು
ಬೈಕ್‌ವೊಂದರಲ್ಲಿ ಸವಣೂರ ತಾಲೂಕು ಶಿರಬಡಗಿ ಗ್ರಾಮದ ಶೇಖಪ್ಪ ಶಿವಪ್ಪ ಅಕ್ಕೂರ (60), ಮಗ ಶಿವಾನಂದ ಅಕ್ಕೂರ, ಶೋಭಾ ಶಿವಾನಂದ ಅಕ್ಕೂರ, ಮೊಮ್ಮಕ್ಕಳಾದ ಈರಪ್ಪ ಮತ್ತು ಆದಿತ್ಯ ಎಂಬ ಬಾಲಕರು ಸೇರಿ ಐವರು ಶಿಗ್ಗಾಂವಿ ಕಡೆಗೆ ಹೊರಟಿದ್ದರು. ಹಿಂದಿನಿಂದ ಕಿಯಾ ಕಾರಿನಲ್ಲಿ ಬಂದ ಕೇರಳ ಮೂಲದ ಇರ್ಫಾನ್ ಬೈಕ್‌ಗೆ ಗುದ್ದಿ, ನಂತರ ನಿಯಂತ್ರಣ ತಪ್ಪಿ ರಸ್ತೆಬದಿ ಪಲ್ಟಿ ಹೊಡೆಸಿದ್ದಾನೆ.
ಚಿಕಿತ್ಸೆ ಫಲಿಸದೇ ಸಾವು
ತೀವ್ರವಾಗಿ ಗಾಯಗೊಂಡಿದ್ದ ಶೇಖಪ್ಪ ಅಕ್ಕೂರ (60) ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ತಡಸ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net