ಶಿಶುಗಳ ಜನ್ಮಜಾತ ಹೃದಯ ಕಾಯಿಲೆಗೆ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯ

6 - Copy
Published on

ಮೈಸೂರು: ಸಾವಿರದ ಪೈಕಿ 8 ಶಿಶುಗಳು ಜನ್ಮಜಾತ ಹೃದಯ ಕಾಯಿಲೆ (ಚಿಎಚ್‌ಡಿ)ಗೆ ತುತ್ತಾಗುತ್ತಿದ್ದು, ನಗರದ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ಹೃದಯ ಆರೈಕೆಗೆ ಸಮಗ್ರ ಸೇವೆಗಳು ಲಭ್ಯವಿದೆ ಎಂದು ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ್ ಡಾ.ಎಂ.ಎನ್.ರವಿ ಹೇಳಿದರು.

ವಿಶ್ವಾದ್ಯಂತ ಮತ್ತು ಭಾರತದಲ್ಲಿ ಜನ್ಮಜಾತ ಹೃದಯ ದೋಷ ಒಂದು ಮಾರಣಾಂತಿಕ ಸ್ಥಿತಿಯಾಗಿದ್ದು, ಪ್ರತಿ ವರ್ಷ ಸಾವಿರಾರು ಮಕ್ಕಳ ಜೀವವನ್ನು ಬಲಿ ತೆಗೆದುಕೊಳ್ಳುತ್ತದೆ. ನಂಜನಗೂಡು ಮೂಲದ 10 ತಿಂಗಳ ಹೆಣ್ಣು ಮಗುವಿಗೆ ಹೃದಯದಲ್ಲಿ ದೊಡ್ಡ ರಂಧ್ರ(ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್) ಇರುವುದು ಪತ್ತೆಯಾಯಿತು. ಆ ಮಗು ಕೇವಲ 6 ಕೆಜಿ ತೂಕ ಇತ್ತು. ಪುನರಾವರ್ತಿತ ಎದೆಯ ಸೋಂಕುಗಳು ಮತ್ತು ಕಳಪೆ ತೂಕ ಹೆಚ್ಚಳದ ದೂರುಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಮಗುವಿಗೆ ಪ್ರಥಮ ಬಾರಿಗೆ ನಾರಾಯಣ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಜ್ಞ ಶಸ್ತ್ರ ಚಿಕಿತ್ಸಾ ತಂಡದಿಂದ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮತ್ತೊಂದು ಪ್ರಕರಣದಲ್ಲಿ ಮೈಸೂರಿನ ನಿವಾಸಿ ವೀಣಾ ಎಂಬುವರ ಮಗುವಿಗೆ ಬಲಭಾಗದ ಓಟ್ಲೆಟ್ ವಾಲ್ಟ್(ಶ್ವಾಸಕೋಶದ ಕವಾಟ)ತೀವ್ರವಾಗಿ ಕಿರಿದಾಗಿರುವುದು ಕಂಡು ಬಂದಿತು. ಭ್ರೂಣದ ಎರೋಕಾರ್ಡಿಯೋಗ್ರಾಮ್ ಮೂಲಕ ಗರ್ಭಾವಸ್ಥೆಯಲ್ಲಿ ದೋಷವನ್ನು ಗುರುತಿಸಲಾಯಿತು. ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ ಹಾಗೂ ಜನನದ 15 ದಿನಗಳ ನಂತರ ತೆರೆದ ಶಸ್ತ್ರಚಿಕಿತ್ಸೆ ನಡೆಸದೆಯೇ ನುರಿತ ವೈದ್ಯರಿಂದ ಬಲೂನ್ ಡೈಲೇಷನ್ ಮೂಲಕ ಕಿರಿದಾದ ಕವಾಟವನ್ನು ಯಶಸ್ವಿಯಾಗಿ ಹಿಗ್ಗಿಸಲಾಯಿತು ಎಂದು ವಿವರಿಸಿದರು.

ಸುಧಾರಿತ ಹೃದ್ರೋಗ ಚಿಕಿತ್ಸೆಯು ಕೆಲವೇ ವರ್ಗದ ಮಕ್ಕಳಿಗೆ ಮಾತ್ರ ಲಭ್ಯವಿರುತ್ತದೆ. ಅರಿವಿನ ಕೊರತೆ ಮತ್ತು ಸಕಾಲಿಕ ರೋಗ ನಿರ್ಣಯ ಮಾಡುವುದು ಮಕ್ಕಳ ಹೃದಯ ಆರೈಕೆಗೆ ಇರುವ ಸವಾಲುಗಳಾಗಿವೆ. ಇದನ್ನು ಮನಗಂಡ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಮಕ್ಕಳಿಗೆ ಸಮಗ್ರ ಹೃದ್ರೋಗ ಆರೈಕೆ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ. ವಿಶೇಷ ಕ್ಲಿನಿಕ್, ತರಬೇತಿ ಪಡೆದ ಮಕ್ಕಳ ಹೃದ್ರೋಗ ತಜ್ಞರು, ಶಸ್ತ್ರ ಚಿಕಿತ್ಸಕರು ಮತ್ತು ಅರಿವಳಿಕೆ ತಜ್ಞರು ಮಕ್ಕಳ ಚಿಕಿತ್ಸೆ ನಿರ್ವಹಿಸುವಲ್ಲಿ ಸಹಾಯ ಮಾಡುತ್ತಿದ್ದಾರೆ ಎಂದರು.

ಆಸ್ಪತ್ರೆಯ ಪೀಡಿಯಾಟ್ರಿಕ್ ಕಾರ್ಡಿಯಾಕ್ ಸರ್ಜನ್ ಡಾ.ರವಿವರ್ಮಾ ಪಾಟೀಲ್ ಮಾತನಾಡಿ, ನವಜಾತ ಶಿಶುಗಳಲ್ಲೂ ಹೃದಯದ ತೊಂದರೆ ಬರುತ್ತಿದೆ. ಆ ಸಮಸ್ಯೆಗೂ ನಗರದ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಇದೆ. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು ಎಂದರು.

ನಾವು ಮೈಸೂರಿನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 50 ಕ್ಕೂ ಹೆಚ್ಚು ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಮೊದಲ ಬಾರಿಗೆ ಆಸ್ಪತ್ರೆಯಲ್ಲಿ ಮಕ್ಕಳ ಸಮಗ್ರ ಹೃದಯ ಸೇವೆಗಳನ್ನು ಒದಗಿಸುತ್ತಿದ್ದೇವೆ. ಪರಿಣಿತ ಮಕ್ಕಳ ಹೃದ್ರೋಗ ತಜ್ಞರು, ಹೃದಯ ಶಸ್ತ್ರ ಚಿಕಿತ್ಸಕರು, ಅರಿವಳಿಕೆ ತಜ್ಞರು ಮತ್ತು ಇಂಟೆನ್ಸಿವಿಸ್ಟ್‌ಗಳ ತಂಡವು ನೀಡುತ್ತಿರುವ ಸಮಗ್ರ ಸೇವೆಯಿಂದಾಗಿ ರೋಗಿಗಳು ಉತ್ತಮ ಚಿಕಿತ್ಸೆಗಾಗಿ ದೂರದ ಬೆಂಗಳೂರು ಮತ್ತು ಇತರ ಮಹಾನಗರಿಗಳಿಗೆ ಪ್ರಯಾಣ ಮಾಡಬೇಕಾದ ಪರಿಸ್ಥಿತಿಯನ್ನು ತಗ್ಗಿಸಲಾಗಿದೆ ಎಂದು ತಿಳಿಸಿದರು. ಮಕ್ಕಳ ಹೃದ್ರೋಗ ತಜ್ಞ ಡಾ.ಆನಂದ್ ಲಿಂಗನ್ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net