

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೂಳೂರಿನಲ್ಲಿ ಶನಿವಾರ ಬೆಳಗ್ಗೆ ಮತ್ತು ಸಾಯಂಕಾಲ ಸುಮಾರು ಎರಡು ತಾಸು ಕಾಲ ವಾಹನ ದಟ್ಟಣೆ ಉಂಟಾಗಿತ್ತು.
ಕೂಳೂರು ಸೇತುವೆ ಬಳಿ ಕಳೆದ ವರ್ಷ ಒಡೆದು ಹೋಗಿದ್ದ ಕುಡಿಯುವ ನೀರಿನ ಕೊಳವೆ ಸರಿಪಡಿಸಲು ತೆಗೆದ ಗುಂಡಿಯನ್ನು ತಾತ್ಕಾಲಿಕವಾಗಿ ಜಲ್ಲಿ ಕಲ್ಲು ಹಾಗೂ ಸಿಮೆಂಟ್ ಹುಡಿ ಹಾಕಿ ಸರಿಪಡಿಸಲಾಗಿತ್ತು. ಬೇಸಗೆಯಲ್ಲಿ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ. ಈಗ ಸುರಿಯುತ್ತಿರುವ ಮಳೆಯಿಂದಾಗಿ ಅದರ ಮೇಲೆ ನಿರಂತರವಾಗಿ ವಾಹನಗಳು ಸಂಚರಿಸಿದ ಪರಿಣಾಮ ಒಳಗಿನಿಂದ ಮಣ್ಣು ಜಗ್ಗಿದೆ. ಪರಿಣಾಮ ಹೊಂಡ ಬಿದ್ದಿದೆ. ಇದರಿಂದಾಗಿ ವಾಹನಗಳು ಸರಾಗವಾಗಿ ಸಂಚರಿಸಲಾಗದೆ ದಟ್ಟಣೆ ಉಂಟಾಗುತ್ತಿದೆ.
ಬೇಸಗೆಯಲ್ಲಿ ಅಲ್ಲಿ ಜಲ್ಲಿ ಹಾಕಿ ಡಾಂಬರು ಅಥವಾ ಕಾಂಕ್ರೀಟು ಹಾಕುತ್ತಿದ್ದರೆ ಸಮಸ್ಯೆ ಉಂಟಾಗುತ್ತಿರಲಿಲ್ಲ. ಇನ್ನು ಮತ್ತೆ ತಾತ್ಕಾಲಿಕ ದುರಸ್ಥಿ ಮಾಡಬೇಕಾಗಿದೆ. ಮಳೆ ಕಡಿಮೆಯಾಗದ ಹೊರತು ಇಲ್ಲಿ ಶಾಶ್ವತ ಗುಂಡಿ ಮುಚ್ಚುವುದು ಕಷ್ಟ ಸಾಧ್ಯ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುಂಡಿಯಾದ ಸ್ಥಳದಲ್ಲಿ ಒಳಗಡೆ ಗಟ್ಟಿ ಮಾಡದೆ ಮೇಲ್ಮೈ ಮೇಲೆ ಡಾಂಬರು ಹಾಕಿದೆ. ಈಗ ಒಳಗೆ ಕುಸಿದು ಸಮಸ್ಯೆ ಉಂಟಾಗಿದೆ.
ಬೆಳಗ್ಗೆ ಮತ್ತು ಸಂಜೆಯ ವೇಳೆ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವುದರಿಂದ ಕಿಲೋ ಮೀಟರ್ ತನಕ ಉದ್ದದ ಸಾಲು ಕಂಡು ಬರುತ್ತಿದೆ. ಶನಿವಾರ ಬೆಳಗ್ಗೆ ಕೊಟ್ಟಾರದ ತನಕ ವಾಹನಗಳು ಸಾಲುಗಟ್ಟಿ ನಿಂತಿದ್ದವು. ತುರ್ತು ಪ್ರಯಾಣ ಮಾಡುವವರು ಇದರಿಂದ ತೊಂದರೆಗೊಳಗಾದರು.