ಆಗಸ್ಟ್ 22 ರಂದು ಪರಿಹಾರ ಮೊತ್ತ ಬಿಡುಗಡೆ ಒತ್ತಾಯಿಸಿ ಎನ್‌ಎಚ್169 ಭೂ ಮಾಲೀಕರ ಹೋರಾಟ ಸಮಿತಿ ಪ್ರತಿಭಟನೆ

IMG-20230818-WA0056
Published on

ಮಂಗಳೂರು: ನಗರದ ನಂತೂರಿನಿಂದ ಮೂಡಬಿದಿರೆಯ ತನಕ ರಾಷ್ಟ್ರೀಯ ಹೆದ್ದಾರಿಗಾಗಿ ಸ್ವಾಧೀನಪಡಿಸಿದ ಭೂಮಿಗೆ ಸೂಕ್ತ ಪರಿಹಾರ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಎನ್‌ಎಚ್169 ಭೂ ಮಾಲೀಕರ ಹೋರಾಟ ಸಮಿತಿಯು ಆ. 22ರಂದು ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರ ಮಂಗಳೂರು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.


ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷೆ ಮರಿಯಮ್ಮ ಥೋಮಸ್, 2016ರಿಂದ ನಮ್ಮ ಭೂಮಿ ಸರ್ಕಾರದ ಕೈಯ್ಯಲ್ಲಿದೆ. 2020ರಿಂದ ಭೂ ಪರಿಹಾರ ನೀಡುವ ಪ್ರಕ್ರಿಯೆಗಳು ನಡೆಯುತ್ತಿದ್ದರೂ ಇನ್ನೂ ಪರಿಹಾರ ದೊರೆತ್ತಿಲ್ಲ. ಆದ್ದರಿಂದ 20 ಗ್ರಾಮಗಳ ಭೂಮಾಲೀಕರು ಪ್ರತಿಭಟನೆಗೆ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.


ಭೂ ಪರಿಹಾರವಾಗಿ 2016ರಲ್ಲಿ ನಿಗದಿಪಡಿಸಲಾಗಿದ್ದ 485 ಕೋಟಿ ರೂ. ಪರಿಹಾರ ಪ್ರಕ್ರಿಯೆ ವಿಳಂಬಗೊಂಡ ಹಿನ್ನೆಲೆಯಲ್ಲಿ 2020ರ ದರ ನಿಗದಿಯೊಂದಿಗೆ 1073 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಸುಮಾರು ಆರು ತಿಂಗಳ ಹಿಂದೆ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ ಈ ಪರಿಹಾರ ಸಂಬಂಧಿಸಿದ ಕಡತ ಕೇಂದ್ರದ ಸಾರಿಗೆ ಸಚಿವಾಲಯದಲ್ಲಿದೆ. ಆದರೆ ಕೆಲ ದಿನಗಳ ಹಿಂದೆ ಈ ಬಗ್ಗೆ ವಿಚಾರಿಸಿದಾಗ ಆ ಕಡತ ಬೆಂಗಳೂರಿನ ಎನ್‌ಎಚ್ ಕಚೇರಿಯಿಂದ ದಿಲ್ಲಿಯ ಎನ್‌ಎಚ್ ಕಚೇರಿವರೆಗೆ ಮಾತ್ರ ಸಾಗಿದೆ. ದರದಲ್ಲಿ ಆಗಿರುವ ವ್ಯತ್ಯಾಸಕ್ಕೆ ಸಂಬಂಧಿಸಿ ಅಲ್ಲಿಂದ ಬರುವ ಪ್ರಶ್ನೆಗಳಿಗೆ ಉತ್ತರ ನೀಡುವುದರಲ್ಲೇ ವಿಳಂಬವನ್ನು ಮಾಡಲಾಗುತ್ತಿದೆ. ಕಳೆದ ಮಾರ್ಚ್‌ನಲ್ಲಿ ಪ್ರಾದೇಶಿಕ ಅಧಿಕಾರಿಯ ಸಭೆ ನಡೆಸಿ ಒಂದು ತಿಂಗಳ ಒಳಗೆ ತೀರ್ಮಾನ ಮಾಡುವ ಭರವಸೆ ನೀಡಲಾಗಿತ್ತು. ಆದರೆ ನಾಲ್ಕು ತಿಂಗಳಾದರೂ ಪರಿಹಾರ ದೊರಕಿಲ್ಲ ಎಂದು ಅವರು ಕ್ಷೇಪಿಸಿದರು.


ಪದವು ಗ್ರಾಮದ ಭೂಸ್ವಾಧೀನತೆಗೆ ಒಳಪಟ್ಟ ಜಮೀನಿನ ಹೈಕೋರ್ಟ್ ಆದೇಶದ ವಿರುದ್ದ ಜಿಲ್ಲಾ ನ್ಯಾಯಾಲದಲ್ಲಿ ದಾಖಲಿಸಿರುವ ಮೇಲ್ಮನವಿ ವಾಪಾಸು ಪಡೆದು ಪರಿಹಾರ ಮೊತ್ತಮವನ್ನು 15 ದಿನಗಳ ಒಳಗೆ ಭೂಮಾಲೀಕರಿಗೆ ಪಾವತಿಸಬೇಕು. ಕಾರ್ಕಳ ತಾಲೂಕಿನ ಸಾಣೂರು, ಮೂಡಬಿದಿರೆ ತಾಲೂಕಿನ ಪುತ್ತಿಗೆ ಹಾಗೂ ಪಡುಮಾರ್ನಡು ಗ್ರಾಮಗಳ ಬಗ್ಗೆ ತಯಾರಿಸಿದ ಪ್ರಥಮ ಅವಾರ್ಡ್‌ಅನ್ನು ಉಚ್ಛ ನ್ಯಾಯಾಲಯ ಎತ್ತಿ ಹಿಡಿದು ಅಗತ್ಯ ಕ್ರಮ ಜರುಗಿಸಲು ನಿರ್ದೇಶಿರುವಂತೆ ಕ್ರಮ ವಹಿಸಬೇಕು. ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ದಾಖಲಿಸಲಾದ ಆರ್ಬಿಟ್ರೇಶನ್ ಆದೇಶದಂತೆ ಪುತ್ತಿಗೆ ಪಡುಮಾರ್ನಾಡು ಗ್ರಾಮಗಳ ಬಗ್ಗೆ ತಯಾರಿಸಿದ ಪ್ರಥಮ ಅವಾರ್ಡ್‌ನಂತೆ ಅವಾರ್ಡ್ ತಯಾರಿಸಿ ಭೂ ಮಾಲೀಕರಿಗೆ ಪರಿಹಾರ ನೀಡಬೇಕು. ಭೂ ಪರಿಹಾರ ನೀಡುವ ಸಂದರ್ಭ ಶೇ. 12ರ ಹೆಚ್ಚುವರಿ ಪರಿಹಾರ ಪಾವತಿಗೆ ಆದೇಶ ನೀಡಬೇಕು ಎಂಬು ಬೇಡಿಕೆಯೊಂದಿಗೆ ಪ್ರತಿಭಟನೆ ನಡೆಯಲಿದೆ ಎಂದು ಅವರು ವಿವರಿಸಿದರು.


ಕುಡುಪು, ತಿರುವೈಲು, ಅಡ್ಡೂರು, ಮೂಳೂರು, ಕಂದಾವರ, ಮೂಡುಪೆರಾರ, ತೋಡಾರು, ಬಡಗುಳಿಪಾಡಿ ಮತ್ತು ತೆಂಕುಳಿಪಾಡಿ, ಬಡಗ ಎಡಪದವು ಮತ್ತು ತೆಂಕ ಎಡಪವು, ಬಡಗಮಿಜಾರು, ತೆಂಕ ಮಿಜಾರ, ಮರ‌್ಪಾಡಿ, ಪುತ್ತಿಗೆ, ಪಡುರ್ಮಾನಾಡ್ , ಬೆಳುವಾಯಿ, ಸಾಣೂರು ಗ್ರಾಮದ ಭೂಮಾಲೀಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಸಂಚಾಲಕ ಪ್ರಕಾಶ್ಚಂದ್ರ, ವಿಶ್ವಜಿತ್, ರತ್ನಾಕರ ಶೆಟ್ಟಿ, ಜಯರಾಂ ಪೂಜಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net