

ಮಂಗಳೂರು: ಕುಲಶೇಖರಿಂದ ಕಾರ್ಕಳ (ಸಾಣೂರು)ವರೆಗಿನ ರಾ.ಹೆದ್ದಾರಿ 169ರ ಅಗಲೀಕರಣಕ್ಕಾಗಿ ಭೂಸ್ವಾಧೀನಗೊಂಡವರಿಗೆ ಸೂಕ್ತ ಪರಿಹಾರದ ಹಣ ಬ್ಯಾಂಕ್ ಖಾತೆಗೆ ಜಮಾ ಆಗುವವರೆಗೂ ಒಂದಿಂಚೂ ಜಾಗವನ್ನು ಬಿಡುವುದಿಲ್ಲ ಎಂದು ಭೂ ಮಾಲೀಕರ ಹೋರಾಟ ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್ ಹೇಳಿದ್ದಾರೆ.
ನಂತೂರಿನ ತಾರೆತೋಟ ಬಳಿ ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಕಚೇರಿ ಎದುರು ರಾಷ್ಟ್ರೀಯ ಹೆದ್ದಾರಿ 169 ಭೂಮಾಲೀಕರ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರದಿಂದ ಆ.30ರವರೆಗೆ ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
2016ರಿಂದ ಭೂಮಿ ಸರ್ಕಾರದ ಕೈಯ್ಯಲ್ಲಿದೆ. 2020ರಿಂದ ಭೂ ಪರಿಹಾರ ನೀಡುವ ಪ್ರಕ್ರಿಯೆಗಳು ನಡೆಯುತ್ತಿದ್ದರೂ ಪರಿಹಾರ ಮಾತ್ರ ನೀಡಿಲ್ಲ. ಅಧಿಕಾರಿಗಳ ವಿಳಂಬ ನೀತಿಯಿಂದಾಗಿ 483 ಕೋಟಿ ರೂ.ಗಳಿದ್ದ ಪರಿಹಾರ ಧನ 1,113 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಕಾಮಗಾರಿ ನಡೆಯದೆೆ ಟ್ರಾಫಿಕ್ ಸಮಸ್ಯೆಯಿಂದ ಪ್ರತಿನಿತ್ಯ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ ಎಂದು ಮರಿಯಮ್ಮ ಥಾಮಸ್ ಆರೋಪಿಸಿದರು.
ಸರ್ಕಾರದ ಜತೆ ಭೂಮಿ ಕಳೆದುಕೊಂಡವರು ಪರಿಹಾರ ಹಣ ಭಿಕ್ಷೆ ನೀಡುವುದಲ್ಲ. ತಮ್ಮ ಮೌಲ್ಯಯುತ ಆಸ್ತಿಯನ್ನು ಕಳೆದುಕೊಂಡು ಮತ್ತೆ ಬದುಕು ಕಟ್ಟಿಕೊಳ್ಳಬೇಕಾದರೆ ಸೂಕ್ತ ಪರಿಹಾರ ಒದಗಿಸುವುದು ಸರ್ಕಾರದ ಕರ್ತವ್ಯ. ರಸ್ತೆ ನಿರ್ಮಾಣದ ಬಳಿಕ ಅಲ್ಲಿ ಟೋಲ್ ಮೂಲಕ ಹಣ ಸಂಗ್ರಹಿಸುತ್ತಾರೆ. ಹಾಗಿರುವಾಗ ಭೂ ಸಂತ್ರಸ್ತರಿಗೆ ಪರಿಹಾರ ನೀಡಲು ಈ ರೀತಿಯ ವಿಳಂಬ ಧೋರಣೆ ಯಾಕೆ ಅನುಸರಿಸುತ್ತಿದೆ ಎಂದು ಅವರು ಪ್ರಶ್ನಿಸಿದರು.
ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಕಚೇರಿ ಎದುರು 9 ದಿನಗಳ ಕಾಲ ನಡೆಯಲಿರುವ ಧರಣಿಯಲ್ಲಿ ಪ್ರಥಮ ದಿನವಾದ ಮಂಗಳವಾರದ ಪ್ರತಿಭಟನೆಯಲ್ಲಿ ಪದವು ಗ್ರಾಮ ಹಾಗೂ ಆಸುಪಾಸಿನ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದು, ಧರಣಿಯ ಉಳಿದ ದಿನಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಹಲವು ಗ್ರಾಮಗಳ ಗ್ರಾಮಸ್ಥರು ಭಾಗವಹಿಸಲಿದ್ದಾರೆ. ಈ ಒಂಭತ್ತು ದಿನಗಳಲ್ಲಿ ಬೇಡಿಕೆ ಈಡೇರದಿದ್ದರೆ ಮುಂದೆ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸುವುದಾಗಿ ಅವರು ಹೇಳಿದರು.
ಪ್ರತಿಭಟನೆ ಉದ್ಘಾಟನೆಗೆ ಮುನ್ನ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಪ್ರತಿಭಟನಾಕಾರರು ಕಪ್ಪು ಶಾಲು ಧರಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಸಂಚಾಲಕ ಪ್ರಕಾಶ್ಚಂದ್ರ, ವಿಶ್ವಜಿತ್, ರತ್ನಾಕರ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.