ಸೆ.25ರಂದು ಎನ್‌ಎಚ್ 13ರ ಸಂಚಾರ ತಡೆಯುವುದಾಗಿ ಹೇಳಿದ ರೈತರ ಸಂಘ, ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತಿಕ್

J Karthik Farmers Union General Secratary 02
ಜೆ.ಕಾರ್ತಿಕ, ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ.
Published on

ಹೊಸಪೇಟೆ: ರೈತ ವಿರೋಧಿ ಸುಗ್ರೀವಾಜ್ಞೆಗಳನ್ನು ವಿರೋಧಿಸಿ ಸೆ.25 ರಂದು ತುಂಗಭದ್ರಾ ಜಲಾಶಯದ ಬಳಿ ರಾಷ್ಟ್ರೀಯ ಹೆದ್ದಾರಿ 13ರ ಸಂಚಾರ ತಡೆ ನಡೆಸಲಾಗುವುದು ಎಂದು ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತಿಕ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕರೊನಾ ನೆಪದಲ್ಲಿ ರೈತರನ್ನು ಬೀದಿಗೆ ಬರದಂತೆ ಮಾಡಿ, ರೈತರೊಂದಿಗೆ ಚರ್ಚಿಸದೆ ರೈತ ವಿರೋಧಿ ಕಾನೂನುಗಳನ್ನು ಜಾರಿಗೊಳಿಸುತ್ತಿರುವುದು ಖಂಡನೀಯ. ಭೂ ಸುಧಾರಣಾ ಕಾಯ್ದೆ, ಎಪಿಎಂಸಿ, ವಿದ್ಯುತ್ ಹಾಗೂ ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ರೈತ ವಿರೋಧಿಯಾಗಿದ್ದು, ಕೂಡಲೇ ಸುಗ್ರೀವಾಜ್ಞೆಗಳನ್ನು ಹಿಂಪಡೆಯಬೇಕು ಎಂದರು. ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳನ್ನು ಪುನಾರಂಭಿಸಬೇಕು. ಹೊಸಪೇಟೆ, ಕಂಪ್ಲಿ ಹಾಗೂ ಸಿರಗುಪ್ಪದ ಸ್ಥಗಿತಗೊಂಡ ಸಕ್ಕರೆ ಕಾರ್ಖಾನೆಗಳನ್ನು ಸರ್ಕಾರ ಆರಂಭಿಸಬೇಕು. ಸರ್ಕಾರಕ್ಕೆ ಸಾಧ್ಯವಿಲ್ಲದಿದ್ದರೆ ಸಹಕಾರಿಗಳಿಗೆ ಸಕ್ಕರೆ ಕಾರ್ಖಾನೆ ನೀಡಲು ಅಗತ್ಯ ನೆರವು ನೀಡಿ ಆರಂಭಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಪಿ.ನಾರಾಯಣರೆಡ್ಡಿ ಮಾತನಾಡಿ, ಕಂಪ್ಲಿಯ ಸಕ್ಕರೆ ಕಾರ್ಖಾನೆ ಸ್ಥಳವನ್ನು ಪರಾಭಾರೆ ಮಾಡಲು ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಕಾರ್ಖಾನೆ ರಕ್ಷಿಸಬೇಕು ಎಂದರು. ಮುಖಂಡರಾದ ವಿ.ಟಿ.ನಾಗರಾಜ, ಬಿ.ವಿ.ಗೌಡ, ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಜೆ.ರಾಘವೇಂದ್ರ, ಎಚ್.ಬಿ.ಮಲ್ಲಿಕಾರ್ಜುನ, ಅಯ್ಯಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net