

ಹುಬ್ಬಳ್ಳಿ: ಸರ್ಕಾರಿ ಸ್ವಾಮ್ಯದ ವಿದ್ಯುತ್ ಪರಿವರ್ತಕ ತಯಾರಿಸುವ ಕಂಪನಿ ನ್ಯೂ ಗವರ್ನಮೆಂಟ್ ಇಲೆಕ್ಟ್ರಿಕ್ ಫ್ಯಾಕ್ಟರಿ (ಎನ್ ಜಿ ಇ ಎಫ್) ಇದೀಗ ಮತ್ತೊಂದು ಹೊಸ ಮಜಲಿಗೆ ತೆರೆದುಕೊಂಡಿದೆ.
ಈಗಾಗಲೇ ವಿದ್ಯುತ್ ಮೋಟಾರ್ ತಯಾರಿಸಿ ಗುಣಮಟ್ಟಕ್ಕಾಗಿ ದೇಶ ವಿದೇಶಗಳಲ್ಲಿ ಗ್ರಾಹಕರನ್ನು ಹೊಂದಿರುವ ಎನ್ ಜಿ ಇ ಎಫ್ ಕೆಲ ವರ್ಷಗಳಿಂದ ವಿದ್ಯುತ್ ಪರಿವರ್ತಕಗಳನ್ನು (ಟಿಸಿ) ಉತ್ಪಾದನೆ ಮಾಡುವ ಮೂಲಕ ವಿಶಿಷ್ಟ ಸಾಧನೆ ಮಾಡುತ್ತಿದೆ.
ವಿಶೇಷವಾಗಿ ಅತಿ ಹೆಚ್ಚು ಸಾಮರ್ಥ್ಯದ ಟಿಸಿ ಉತ್ಪಾದನೆ ಮಾಡುವಲ್ಲಿ ನಿರತವಾಗಿರುವ ಎನ್ ಜಿ ಇ ಎಫ್ ಗೆ ಕೆಲ ತಿಂಗಳ ಹಿಂದೆ ಗುಜರಾತ್‌ನ ರೈಲ್ವೆ ಯೋಜನೆಗಾಗಿ ರೈಲ್ವೆ ಇಲಾಖೆ ಟಿಸಿ ಬೇಡಿಕೆ ಸಲ್ಲಿಸಿತ್ತು. ಅದರಂತೆ 14 ಬೃಹತ್ ಟಿಸಿ ಉತ್ಪಾದನೆ ಮಾಡಿ ಪೂರೈಕೆ ಮಾಡುತ್ತಿದೆ.
ಹುಬ್ಬಳ್ಳಿ ಎನ್ ಜಿ ಇ ಎಫ್ ನಲ್ಲಿ ಎರಡು ತಿಂಗಳ ಹಿಂದೆ ಐದು ಟಿಸಿ ತಯಾರಿಸಿ ಕಳುಹಿಸಿಕೊಡಲಾಗಿದೆ. ಇದೀಗ ಉಳಿದ 9 ಟಿಸಿಗಳನ್ನು ಪಂಜಾಬ್‌ನ ಭಟಿಂದಾದಲ್ಲಿರುವ ಎನ್ ಜಿ ಇ ಎಫ್ ಶಾಖೆಯಲ್ಲಿ ತಯಾರಿಸಲಾಗಿದೆ. ಇದೀಗ ಅವುಗಳನ್ನು ಹುಬ್ಬಳ್ಳಿಯ ಮುಖ್ಯ ಕಚೇರಿಯಲ್ಲಿ ಪರೀಕ್ಷೆಗೆ ಒಳಪಡಿಸಿ ಗುಜರಾತ್‌ನ ರೈಲ್ವೆ ಯೋಜನೆಗಾಗಿ ಕಳುಹಿಸಿ ಕೊಡಲಾಗುತ್ತಿದೆ.
ಸದ್ಯ ಭಟಿಂದಾದಿಂದ 9 ಟ್ರಾಮ್ ಫಾರ್ಮರ್ ಗಳು ಲಾರಿಯಲ್ಲಿ ಲೋಡ್ ಆಗಿ ಹುಬ್ಬಳ್ಳಿಯತ್ತ ಮುಖ ಮಾಡಿವೆ. ನಾಲ್ಕೈದು ದಿನದಲ್ಲಿ ಹುಬ್ಬಳ್ಳಿ ಎನ್ ಜಿ ಇ ಎಫ್ ಬರಲಿವೆ ಎಂದು ಕಂಪನಿ ಎಂಡಿ ಎಸ್.ಎಚ್. ನರೇಗಲ್ ತಿಳಿಸಿದ್ದಾರೆ.
ಡಿ. 26, 27ರಂದು ರೈಲ್ವೆ ಇಲಾಖೆಯಿಂದ ಎನ್ ಜಿ ಇ ಎಫ್ ಗೆ ಬರುವ ಅಧಿಕಾರಿಗಳು ಪರೀಕ್ಷೆ ನಡೆಸುವರು. 400 ಕೆವಿಎ, 500 ಕೆವಿಎ, 630 ಕೆವಿಎ, 800 ಕೆವಿಎ ಸಾಮರ್ಥ್ಯದ ಟಿಸಿಗಳು ಇವಾಗಿವೆ.
ಬರುವ ಜನೆವರಿಯಲ್ಲಿ ಗುಜರಾತ್‌ನ ದಹೋಡಾನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೆ ಯೋಜನೆಯನ್ನು ಉದ್ಘಾಟನೆ ಮಾಡಲಿದ್ದಾರೆ.