

ಕೊಳ್ಳೇಗಾಲ: ಪಟ್ಟಣದ ಲಿಂಗಣಾಪುರ ಬಡಾವಣೆಯಲ್ಲಿ ಪರಿಶಿಷ್ಟ ಜಾತಿ ಮುಖಂಡರು ಸಾರ್ವಜನಿಕ ಗ್ರಂಥಾಲಯ ನಿರ್ಮಾಣಕ್ಕೆ ಹಾಕಿದ್ದ ಅಡಿಪಾಯವನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಅಧಿಕಾರಿಗಳ ಜತೆಗೂಡಿ ವೀಕ್ಷಣೆ ಮಾಡಿದರು.
ಬಳಿಕ ಬಡಾವಣೆಯಲ್ಲಿರುವ ಶ್ರೀ ಮಂಟೇಸ್ವಾಮಿ ದೇವಾಲಯ ಮುಂಭಾಗ ಬಡಾವಣೆ ನಿವಾಸಿಗಳ ಮನವಿ ಆಲಿಸಿದರು. ಪರಿಶಿಷ್ಟ ಸಮುದಾಯದ ಮುಖಂಡ ಸಿದ್ದಮರಿ ಮಾತನಾಡಿ, ಬಡಾವಣೆಯಲ್ಲಿರುವ ಸರ್ಕಾರಿ ಸ್ಥಳದಲ್ಲಿ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಲಾಗುತ್ತಿದ್ದು, ಜಾಗದ ಪಕ್ಕದ ನಿವೇಶನದವರು ತಕಾರರು ಮಾಡಿದ್ದಾರೆ. ಅವರಿಗೆ ಸೇರಿದ ಜಾಗವನ್ನು ಅಳತೆ ಮಾಡಿಸಿದ ನಂತರ ಸರ್ಕಾರಿ ಜಾಗದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಿಸಲು ಅಡಿಪಾಯ ಹಾಕಲಾಗಿದೆ. ಇಲ್ಲಿ ವೀರಶೈವ-ಲಿಂಗಾಯತ ಸಮಾಜ ಹಾಗೂ ನಮ್ಮ ಸಮಾಜ ಅನ್ಯೋನ್ಯವಾಗಿದೆ ಎಂದರು.
ವೀರಶೈವ-ಲಿಂಗಾಯತ ಮುಖಂಡ ಬಸವರಾಜಪ್ಪ ಮಾತನಾಡಿ, ಪರಿಶಿಷ್ಟ ಹಾಗೂ ನಮ್ಮ ಸಮಾಜ ಸಾಮರಸ್ಯದಿಂದ ಜೀವನ ನಡೆಸುತ್ತಿದೆ. ಈ ನಡುವೆ ಸವರ್ಣೀಯರು ಹಾಗೂ ಪರಿಶಿಷ್ಟರ ನಡುವೆ ಪ್ರಕ್ಷುಬ್ಧ ವಾತಾವರಣವಿದೆ ಎಂದು ಹಬ್ಬಿಸಲಾಗಿದೆ. ಇದರಿಂದ ನಮಗೆ ಬಹಳ ನೋವಾಗಿದೆ. ಬಡಾವಣೆ ಜನರು ಸ್ವಂತ ಹಣದಲ್ಲಿ ಸರ್ಕಾರಿ ಜಾಗದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ. ಗ್ರಂಥಾಲಯ ಕಟ್ಟುವ ಜಾಗದಲ್ಲಿಯೇ ಓವರ್ ಹೆಡ್ ಟ್ಯಾಂಕ್, ದೇವಾಲಯವಿದೆ. ಹಾಗಾದರೆ ಅದನ್ನು ತೆರವುಗೊಳಿಸಲಾಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಸರ್ಕಾರಿ ಜಾಗದಲ್ಲಿ ಗ್ರಂಥಾಲಯ ಕಟ್ಟಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ವರದಿ ಪರಿಶೀಲಿಸಿ ಕ್ರಮ: ಬಡಾವಣೆ ನಿವಾಸಿಗಳ ಮನವಿ ಆಲಿಸಿ ಮಾತನಾಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ, ಸಾರ್ವಜನಿಕವಾಗಿ ಉಪಯೋಗವಾಗಲಿ ಎಂಬ ದೃಷ್ಟಿಯಿಂದ ಗ್ರಂಥಾಲಯ ನಿರ್ಮಿಸುತ್ತಿದ್ದೇವೆ ಎಂದು ಪರಿಶಿಷ್ಟ ಜಾತಿ ಮುಖಂಡರು ತಿಳಿಸಿದ್ದಾರೆ. ಅಂತೆಯೇ ಸಾರ್ವಜನಿಕವಾಗಿ ಆಗುವ ಕೆಲಸಕ್ಕೆ ಸಹಕಾರವಿದೆ ಎಂದು ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಹೇಳುತ್ತಿದ್ದಾರೆ. ಉಪವಿಭಾಗ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ವರದಿ ನೀಡಿದ ಬಳಿಕ ಕ್ರಮ ವಹಿಸಬೇಕಿದೆ. ಅಲ್ಲದೆ ಅಡಿಪಾಯ ಪಕ್ಕದಲ್ಲಿರುವ ಜಾಗದ ಮಾಲೀಕರಿಗೂ ದಾಖಲೆ ಸಲ್ಲಿಸುವಂತೆ ಹೇಳಲಾಗಿದೆ. ಸಂಪೂರ್ಣ ವರದಿ ಬಂದ ಬಳಿಕ ಕ್ರಮವಾಗಲಿದೆ ಎಂದರು.
ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್, ತಹಸಿಲ್ದಾರ್ ಬಸವರಾಜು, ಡಿವೈಎಸ್ಪಿ ಎಂ.ಧಮೇಂದ್ರ, ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಗಡಿ, ನಗರಸಭೆ ನೌಕರರು, ಕಂದಾಯ ಇಲಾಖೆ ಅಧಿಕಾರಿಗಳು, ನಗರಸಭೆ ಸದಸ್ಯ ರಾಮಕೃಷ್ಣ, ಬಡಾವಣೆಯ ಪರಿಶಿಷ್ಟ ಜಾತಿ ಯಜಮಾನರಾದ ಸಿದ್ದರಾಜು, ನಂಜಯ್ಯ, ಚಿಕ್ಕಯಜಮಾನರಾದ ಮಲ್ಲಿಕಾರ್ಜುನ, ಮಹದೇವಸ್ವಾಮಿ, ಮುಖಂಡ ಸೋಮಣ್ಣ ಮತ್ತಿತರರಿದ್ದರು.