

ಲಿಂಗಸುಗೂರು: ಭಾರತ ಕೃಷಿ ಪ್ರಧಾನ ದೇಶವಾಗಿದ್ದರೂ, ಆಧುನಿಕತೆ ಭರಾಟೆಯಿಂದಾಗಿ ರೈತರು ಕೃಷಿ ಕ್ಷೇತ್ರದಿಂದ ವಿಮುಖವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಕೃಷಿ ಕ್ಷೇತ್ರದ ಉತ್ತೇಜನಕ್ಕೆ ಒತ್ತು ನೀಡಬೇಕಿದೆ ಎಂದು ಶಿಕ್ಷಕ ಚಂದ್ರು ಹೇಳಿದರು.
ಬೆಂಡೋಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಬ್ಯಾಗ್ ರಹಿತ ದಿನದ ಪ್ರಯುಕ್ತ ಆಯೋಜಿಸಿದ್ದ ಪರಿಸರದೆಡೆಗೆ ಮಕ್ಕಳ ಪಯಣ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರನ್ನು ದೇಶದ ಬೆನ್ನೆಲಬು ಎಂದು ಕರೆಯುತ್ತೇವೆ. ಆದರೆ ಇತ್ತಿಚಿಗೆ ಕೃಷಿ ವೃತ್ತಿಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಮುಂದಿನ ಪೀಳಿಗೆ ಕೃಷಿ ಕ್ಷೇತ್ರದಿಂದ ವಿಮುಖರಾಗದಂತೆ ಉತ್ತೇಜಿಸಬೇಕಿದೆ. ಪರಿಸರದೆಡೆಗೆ ಮಕ್ಕಳ ಪಯಣ ಎಂಬ ಕಾರ್ಯಕ್ರಮ ಹಮ್ಮಿಕೊಂಡಿರುವುದು ಕೃಷಿಯ ಮಹತ್ವದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ವಿಠ್ಠಲ್ ಕಪನೂರು ಹಾಗೂ ಶಿಕ್ಷಕ ಅಮರೇಶ ಕೃಷಿ ಉಪಕರಣಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು. ಗದ್ದೆಯ ಮಣ್ಣು ಹದಗೊಳಿಸುವುದು, ಭತ್ತ ನಾಟಿ ಮಾಡುವುದು, ಅಕ್ಕಿ ಉತ್ಪಾದನೆ ಬಗ್ಗೆ ಶಿಕ್ಷಕಿ ಸುನೀತಾ ಮಾಹಿತಿ ನೀಡಿದರು. ಮುಖ್ಯಶಿಕ್ಷಕ ಅಶೋಕ, ಶಿಕ್ಷಕರಾದ ಜಗದೀಶ, ಅಮರೇಶ, ವಿಜಯಶಾಂತಿ ಇದ್ದರು.