ಮುಂದಿನ ನಿರ್ಧಾರ 8ರಂದು ಪ್ರಕಟ

2byd1
Published on

ಬ್ಯಾಡಗಿ: ಕಾಂಗ್ರೆಸ್ ಹೈಕಮಾಂಡ್ ಬ್ಯಾಡಗಿ ಕ್ಷೇತ್ರದ ಅಭ್ಯರ್ಥಿ ಬದಲಾಯಿಸಿ ನ್ಯಾಯ ಒದಗಿಸದಿದ್ದಲ್ಲಿ ಏ. 8ರ ಬಳಿಕ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದು ರಾಜ್ಯ ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ ಗುಡುಗಿದ್ದಾರೆ.

ಪಟ್ಟಣದ ಗುಮ್ಮನಹಳ್ಳಿ ರಸ್ತೆಯ ತಮ್ಮ ಕಚೇರಿ ಪ್ರಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಭಿಮಾನಿಗಳ ಸಭೆಯಲ್ಲಿ ಅವರು ಮಾತನಾಡಿದರು.

2008, 2013ರಲ್ಲಿ ಮಾತು ತಪ್ಪಿದ ಮಾಜಿ ಶಾಸಕರ ನಡೆಯನ್ನು ಮತದಾರರು ಮರೆತಿಲ್ಲ. ಕಳೆದ ಬಾರಿ ನನ್ನ ಸೋಲಿಗೆ ಯಾರು ಕಾರಣ ಎನ್ನುವುದು ಗೊತ್ತಿದೆ. ನಾಲಿಗೆ ತಪ್ಪುವ ರಾಜಕಾರಣಿ ನಾನಲ್ಲ, ಸಮಯ ಸಾಧಕರಿಗೆ ಟಿಕೆಟ್ ಬೇಡ. ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಅಭ್ಯರ್ಥಿ ಬದಲಾಯಿಸಬೇಕು ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಕರೆ ಮಾಡಿ ಮಾತನಾಡಿ, ಪಾಟೀಲರೇ ಯಾವುದೇ ಕಾರಣಕ್ಕೂ ಪಕ್ಷದಿಂದ ಹೊರ ಹೋಗಬೇಡಿ. ಟಿಕೆಟ್ ಪರಿಶೀಲನೆ ಮಾಡುತ್ತೇನೆ ಎಂದಿದ್ದಾರೆ. ಏ. 8ರ ಬಳಿಕ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ. ಜೆಡಿಎಸ್​ನಿಂದ ಆಹ್ವಾನ ಬಂದಿದ್ದು, ಆದರೆ, ಯಾವುದೇ ತೀರ್ಮಾನ ಮಾಡಿಲ್ಲ ಎಂದರು.

ವಕೀಲ ಪ್ರಕಾಶ ಬನ್ನಿಹಟ್ಟಿ, ತೋಟಪ್ಪ ಅಕ್ಕಿ, ಕಾಗಿನೆಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವನಗೌಡ್ರ ವೀರನಗೌಡ್ರ, ವಕೀಲ ಶಿವಪ್ಪ ಅಂಬಲಿ, ಕರಬಸಪ್ಪ ನಾಯ್ಕರ, ಮುಖಂಡರಾದ ಚನ್ನಬಸಪ್ಪ ಹುಲ್ಲತ್ತಿ, ದಾನನಗೌಡ ತೋಟದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net