ಟ್ರಯಲ್ ಬ್ಲಾಸ್ಟ್ ನಂತರ ಮುಂದಿನ ನಿರ್ಧಾರ

11-pnp 1a
ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ ಮತ್ತು ಕೆಆರ್‌ಎಸ್ ಅಣೆಕಟ್ಟೆ ಸುತ್ತಲಿನ ಪ್ರದೇಶದ ನಡೆಯುತ್ತಿರುವ ಗಣಿಗಾರಿಕೆ ವಿಚಾರವಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಗಣಿಗಾರಿಕೆ ಸುತ್ತಲಿಮ ಪ್ರದೇಶದ ಗ್ರಾಮಸ್ಥರ ಸಭೆ ಆಯೋಜಿಸಲಾಗಿತ್ತು.
Published on

ಪಾಂಡವಪುರ: ದಿನಗೂಲಿ ಮಾಡುತ್ತಿರುವವರಿಗೆ ತೊಂದರೆ ಕೊಡುವ ಮನಸ್ಥಿತಿ ಯಾರಿಗೂ ಇಲ್ಲ. ಜನರಿಗೆ ಜೀವನ ಕಟ್ಟಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಅದರ ಜತೆಗೆ ಅಣೆಕಟ್ಟೆ ಸುರಕ್ಷತೆಯೂ ಮುಖ್ಯ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ತಾಲೂಕಿನ ಬೇಬಿ ಬೆಟ್ಟದ ಮಠದ ಆವರಣದಲ್ಲಿ ಕೆಆರ್‌ಎಸ್ ಅಣೆಕಟ್ಟೆ ಸುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಅಣೆಕಟ್ಟೆಗೆ ಎದುರಾಗಬಹುದಾದ ಅಪಾಯಗಳ ಸಾಧ್ಯ ಸಾಧ್ಯತೆ ಬಗ್ಗೆ ಚರ್ಚಿಸಲು ಭಾನುವಾರ ಆಯೋಜಿಸಿದ್ದ ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮತ್ತು ಗಣಿಗಾರಿಕೆ ಪ್ರದೇಶದ ಸುತ್ತಲಿನ ಗ್ರಾಮಸ್ಥರ ಸಭೆಯಲ್ಲಿ ಅವರು ಮಾತನಾಡಿದರು.

ಗಣಿಗಾರಿಕೆಯಿಂದ ಅಣೆಕಟ್ಟೆ ಸಂಭವಿಸಬಹುದಾದ ಅಪಾಯಗಳ ಬಗ್ಗೆ ಅಧ್ಯಯನ ನಡೆಸಲು ಟ್ರಯಲ್ ಬ್ಲಾಸ್ಟ್ ನಡೆಸಬೇಕಿದೆ. ಮಾ.4 ರಿಂದ 15ರೊಳಗೆ ಟ್ರಯಲ್ ಬ್ಲಾಸ್ಟ್ ನಡೆಸಲಾಗುವುದು. ಅಲ್ಲಿಯವರೆಗೆ ಎಲ್ಲರೂ ಸಮಾಧಾನವಾಗಿ ವರ್ತಿಸಬೇಕು, ಗಣಿಗಾರಿಕೆ ವಿಚಾರವಾಗಿ ಈಗಾಗಲೇ ಹೈಕೋರ್ಟ್ ಆದೇಶ ನೀಡಿದೆ. ಅದನ್ನು ಯಾರೂ ಉಲ್ಲಂಘಿಸಲು ಸಾಧ್ಯವಿಲ್ಲ. ಗಣಿಗಾರಿಕೆ ಮೇಲೆ ಅವಲಂಬಿತರಾಗಿ ಜೀವನ ನಡೆಸುತ್ತಿರುವ ಬಡವರ ಕಷ್ಟ ನಮಗೆ ಅರ್ಥವಾಗುತ್ತದೆ. ಟ್ರಯಲ್ ಬ್ಲಾಸ್ಟ್ ವರದಿ ಆಧಾರದ ಮೇಲೆ ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ಯಾವ ರೀತಿ ಮುಂದುವರಿಯಬೇಕು ಎಂದು ಕ್ರಮ ಕೈಗೊಳ್ಳಲಾಗುವುದು ಎಂದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ನಾಗಮಧು ಮಾತನಾಡಿ, ಬ್ಲಾಸ್ಟಿಗ್‌ನಿಂದ ಕೆಆರ್‌ಎಸ್ ಅಣೆಕಟ್ಟೆಗೆ ತೊಂದರೆಯಿದೆ ಎಂದು ಸುತ್ತಲಿನ 20 ಕಿ.ಮೀ. ಪ್ರದೇಶ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಸದಂತೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಅದರಂತೆ ಎಲ್ಲ ರೀತಿಯ ಗಣಿಗಾರಿಕೆ ಮತ್ತು ಕಲ್ಲು ಕ್ರಷಿಂಗ್ ನಡೆಸದಂತೆ ತಡೆಯೊಡ್ಡಲಾಗಿತ್ತು. ಬೇಬಿ ಬೆಟ್ಟ, ಹೊನಗಾನಹಳ್ಳಿ, ಕಣಿವೆಕೊಪ್ಪಲು, ಅಲ್ಪಹಳ್ಳಿ ವ್ಯಾಪ್ತಿಯಲ್ಲಿದ್ದ 33 ಕ್ರಷರ್‌ಗಳ ಪೈಕಿ 11 ಕ್ರಷರ್‌ಗಳ ಅನುಮತಿ ರದ್ದುಪಡಿಸಲಾಗಿತ್ತು. ಈಗ ಆರು ಕ್ರಷರ್‌ಗಳಿದ್ದು ಅವುಗಳ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಇದನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದ ಮೋರೆ ಹೋಗಿದ್ದ ಸಿ.ಸಿ.ಕುಮಾರ್ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಅಣೆಕಟ್ಟೆ ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ ಮತ್ತು ಗಣಿಗಾರಿಕೆ ಸಂಬಂಧಿತ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿ ಆದೇಶಿಸಿದೆ ಎಂದರು.

ಬೇಬಿ ಬೆಟ್ಟ ಕಾವಲ್ ಪ್ರದೇಶ ಮತ್ತು ಕೆಆರ್‌ಎಸ್ ಅಣೆಕಟ್ಟೆ ಸುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿಚಾರವಾಗಿ ನಂ.1 ದಿನಪತ್ರಿಕೆ ವಿಜಯವಾವಣಿ ಫೆ.10 ಸಂಚಿಕೆಯಲ್ಲಿ ಕೆಆರ್‌ಎಸ್ ವ್ಯಾಪ್ತಿಯಲ್ಲಿ ಕದ್ದು ಮುಚ್ಚಿ ಗಣಿಗಾರಿಕೆ ಶಿರ್ಷಿಕೆಯಡಿ ವಿಸೃತ ವರದಿ ಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಶಾಸಕರು, ತಾಲೂಕು ಆಡಳಿತ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಟ್ರಯಲ್ ಬ್ಲಾಸ್ಟ್ ವರದಿ ಬರುವವರೆಗೆ ಯಾವುದೇ ರೀತಿ ಗಣಿಗಾರಿಕೆ ನಡೆಸಬಾರದದು ಎಂದು ಸ್ಥಳೀಯ ಗ್ರಾಮಸ್ಥರು ಮತ್ತು ಗಣಿ ಮಾಲೀಕರಿಗೆ ಮನವಿ ಮಾಡಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಷಾನ ಇಲಾಖೆ ಹಿರಿಯ ಭೂ ವಿಜ್ಞಾನಿ ರೇಷ್ಮಾ, ತಹಸೀಲ್ದಾರ್ ಜಿ.ಎಸ್.ಶ್ರೇಯಸ್, ರೈತ ಮುಖಂಡರಾದ ಕೆನ್ನಾಳು ನಾಗರಾಜು, ಕ್ಯಾತನಹಳ್ಳಿ ದಯಾನಂದ, ಕಿಸಾನ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಿ.ಆರ್.ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನಗಾನಹಳ್ಳಿ ಕೃಷ್ಣೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net