

ಶಿಗ್ಗಾಂವಿ: ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದಿ, ಸುಂದರ ಸಮಾಜ ನಿರ್ಮಿಸುವಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೇದಾವತಿ ದಾಸನೂರ ಹೇಳಿದರು.
ತಾಲೂಕಿನ ಗೊಟಗೋಡಿಯ ರಾಕ್ ಗಾರ್ಡನ್‌ನ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಸೋಮವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತ ತನ್ನದೇ ಆದ ಸೇವೆ ಸಮಾಜಕ್ಕೆ ಮುಟ್ಟಿಸಬೇಕು ಎನ್ನುವ ಮನೋಭಾವನೆ ಹೊಂದಿಕೊಂಡು ನಿತ್ಯದ ಕಾಯಕದಲ್ಲಿ ನಿರತವಾಗಿರುವುದನ್ನುಕಾಣುತ್ತೇವೆ ಎಂದರು.
ಡಿವೈಎಸ್‌ಪಿ ಮಂಜುನಾಥ ಜಿ. ಮಾತನಾಡಿ, ಪತ್ರಿಕೆಗಳ ಋಣ ನಮ್ಮಿಂದ ತೀರಿಸಲು ಆಗದು. ಸೇವಾ ಮನೋಭಾವ ಹೊಂದಿರುವ ಪತ್ರಿಕೆ ಮತ್ತು ಪೊಲೀಸರು ಸಮಾಜವನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋಗಲು ಶ್ರಮ ವಹಿಸುತ್ತಾರೆ. ಡಿಜಿಟಲ್ ಯುಗದಲ್ಲಿ ತಕ್ಷಣವೇ ಸುದ್ದಿಗಳು ನೋಡಲು ಸಿಗುತ್ತವೆ. ಆದರೆ, ನಿಖರವಾದ ಸುದ್ದಿಗಳಿಗಾಗಿ ಇಂದಿಗೂ ಎಲ್ಲ ರಂಗದಲ್ಲಿಯೂ ಪತ್ರಿಕೆ ಮಹತ್ವ ಪಡೆದುಕೊಂಡಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ವೈದ್ಯ ಡಾ. ಹನಮಂತಪ್ಪ ಪಿ.ಎಚ್., ಸಮಾಜದಲ್ಲಿ ಪತ್ರಿಕೆಗಳ ಭಯ ಇರಬೇಕು. ಇಲ್ಲದಿದ್ದರೆ ಅಧಿಕಾರದಲ್ಲಿರುವವರು ಮನಸೋ ಇಚ್ಛೆ ಆಡಳಿತದಲ್ಲಿ ತೊಡಗುವ ಆತಂಕ ಇರುತ್ತದೆ. ಹೀಗಾಗಿ ಸಮಾಜ, ಆಡಳಿತದಲ್ಲಿ ಪಾರದರ್ಶಕತೆಗೆ ಪತ್ರಿಕೆಗಳ ಪಾತ್ರ ಮಹತ್ವದಾಗಿರುತ್ತದೆ ಎಂದರು.
ತಹಸೀಲ್ದಾರ್ ಸಂತೋಷ ಹಿರೇಮಠ, ಕಾನಿಪ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಾಜ್ಯ ಕಾರ್ಯಕಾರಣಿ ಸದಸ್ಯ ಪಿ.ಎಂ. ಸತ್ಯಪ್ಪನವರ, ಜಿಲ್ಲಾ ಉಪಾಧ್ಯಕ್ಷ ಬಿ.ಎಸ್. ಹಿರೇಮಠ ಮಾತನಾಡಿದರು. ಶಿಗ್ಗಾಂವಿ ವಿರಕ್ತಮಠದ ಶ್ರೀ ಸಂಗನಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ತಾಲೂಕಿನ ಪತ್ರಿಕಾ ವಿತರಕರನ್ನು ಮತ್ತು ಶ್ರೇಷ್ಠ ವೈದ್ಯ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಮಹೇಶ ಜಗದವರ, ಡಾ.ರಾಜೇಶ್ವರಿ ಚನ್ನಗೌಡ್ರ, ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿ ಮಾರುತಿ ಶಿವಣ್ಣನವರ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕಾನಿಪ ಸಂಘದ ಅಧ್ಯಕ್ಷ ನಾಗರಾಜ ಕುರುವತ್ತೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರೇಶ ಮಡ್ಲೂರ, ತಾಲೂಕು ಅಧ್ಯಕ್ಷ ಪರಮೇಶ ಲಮಾಣಿ, ಸವಣೂರ ಕಾನಿಪ ಸಂಘದ ಅಧ್ಯಕ್ಷ ಆನಂದ ಮತ್ತಿಗಟ್ಟಿ, ಬಸವರಾಜ ಹೊನ್ನಣ್ಣವರ, ವಿಶ್ವನಾಥ ಬಂಡಿವಡ್ಡರ, ದೇವರಾಜ ಸುಣಗಾರ, ಎಂ.ವಿ. ಗಾಡದ, ಬಸವರಾಜ ಹಡಪದ, ಈಶ್ವರಗೌಡ ಕರಿಗೌಡ್ರ, ಮಂಜು ಕಮ್ಮಾರ, ಸುಧಾಕರ ದೈವಜ್ಞ, ಸಿದ್ರಾಮಗೌಡ ಮೆಳ್ಳಾಗಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪ್ರೊ. ಶಶಿಕಾಂತ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು.