ಪತ್ರಿಕೆಗಳು ಅಪ್ಪ-ಅಮ್ಮನಿಗೆ ಮಾತ್ರ ಸೀಮಿತವಲ್ಲ; ಮಕ್ಕಳೂ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು

31bdvt1
ಪತ್ರಿಕಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಚರ್ಚಾಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು. ವಿ.ಟಿ.ಅರುಣ್, ಆರ್.ಎಸ್.ಹಾಲಸ್ವಾಮಿ, ಕೆ.ಎನ್.ಶ್ರೀಹರ್ಷ, ಕಣ್ಣಪ್ಪ, ಬಸವರಾಜ್ ಇತರರಿದ್ದರು.
Published on

ಭದ್ರಾವತಿ: ಸಮಾಜದ ಸ್ವಾಸ್ಥೃ ಕಾಪಾಡುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದ್ದು ವಿದ್ಯಾರ್ಥಿಗಳು ನಿತ್ಯ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್ ಹೇಳಿದರು.

ಹಳೇನಗರದ ಸಂಚಿಯ ಹೊನ್ನಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, 4ನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕಾ ರಂಗಕ್ಕೆ ಹೆಚ್ಚಿನ ಜವಾಬ್ದಾರಿ ಇದೆ. ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಮಾಜ ಎಚ್ಚರಿಸುವ ಕೆಲಸ ಮಾಡುತ್ತಿದೆ. ಮನೆ ಬಾಗಿಲಿಗೆ ಬರುವ ಪತ್ರಿಕೆಗಳು ಅಪ್ಪ, ಅಮ್ಮನಿಗೆ ಮಾತ್ರ ಸೀಮಿತವಾಗಬಾರದು. ಮಕ್ಕಳೂ ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಆರ್.ಎಸ್.ಹಾಲಸ್ವಾಮಿ ಮಾತನಾಡಿ, ಇಂದು ಪ್ರತಿ ಶಾಲೆ-ಕಾಲೇಜುಗಳಿಗೂ ದಿನಪತ್ರಿಕೆಗಳು ಬರುತ್ತವೆ. ವಿದ್ಯಾರ್ಥಿಗಳು ಗ್ರಂಥಾಲಯಗಳಿಗೆ ತೆರಳಿ ಓದುವ ಪರಿಪಾಠ ಬೆಳಸಿಕೊಳ್ಳಬೇಕು. ಇತ್ತೀಚೆಗೆ ಪತ್ರಿಕೆಗಳನ್ನು ಓದುವ ಹವ್ಯಾಸ ವಿದ್ಯಾರ್ಥಿಗಳಲ್ಲಿ ಕಡಿಮೆಯಾಗಿದ್ದು ಸಾಮಾಜಿಕ ಜಾಲತಾಣದತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಇದು ನಿಜಕ್ಕೂ ಬೇಸರದ ವಿಚಾರ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ಶ್ರೀಹರ್ಷ ಅವರನ್ನು ಗೌರವಿಸಲಾಯಿತು. ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿದ್ದ ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಾಯಾವತಿ, ಕೃಪಾಶ್ರೀ, ಆರ್.ಮೇಘನಾ, ಸುಚಿತ್ರಾ, ಎಚ್.ಎಸ್.ರಚನಾ, ಎಸ್.ದೀಕ್ಷಿತಾ, ಓ.ಪೂಜಾ, ಎಚ್.ಎಸ್.ಸಂಜನಾ ಅವರಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು. ಪ್ರಾಚಾರ್ಯ ಸಿದ್ದಲಿಂಗಮೂರ್ತಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಬಸವರಾಜ್, ಉಪಾಧ್ಯಕ್ಷ ಕೂಡ್ಲಿಗೆರೆ ಮಂಜುನಾಥ್, ಎನ್.ಬಾಬು, ಅನಂತಕುಮಾರ್, ಚನ್ನಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net