

ಮೈಸೂರು: ಬ್ರಿಟಿಷರ ದಾಸ್ಯದ ಸಂಕೋಲೆಯಲ್ಲಿದ್ದ ಭಾರತಕ್ಕೆ ಸ್ವಾತಂತ್ರ್ಯ ದೊರೆಯಲು ವೃತ್ತಪತ್ರಿಕೆಗಳು ಪ್ರಮುಖ ಪಾತ್ರ ವಹಿಸಿದ್ದವು ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಹೇಳಿದರು.
ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ಸ್ವಾತಂತ್ರ್ಯ ಪೂರ್ವದಲ್ಲಿ ವೃತ್ತ ಪತ್ರಿಕೆಗಳ ಪಾತ್ರ’ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಕ್ಕೆ ಪತ್ರಿಕೆಗಳು ಒಗ್ಗಟ್ಟಾಗಿ ಕೈಜೋಡಿಸಿದ್ದವು. ಲೇಖನಗಳು, ಸುದ್ದಿ, ಸಂಪಾದಕೀಯ ಮತ್ತು ಘಟನಾವಳಿಗಳ ಚಿತ್ರಣಗಳನ್ನು ಜನರಿಗೆ ಮನಮುಟ್ಟುವಂತೆ ತಲುಪಿಸಿ ಹೋರಾಟದ ಮನೋಭಾವ ಮತ್ತು ದೇಶಪ್ರೇಮದ ಕಿಚ್ಚನ್ನು ಹಚ್ಚಲು ಪತ್ರಿಕೆಗಳು ಮುನ್ನುಡಿ ಬರೆದವು ಎಂದರು.
ದೇಶದ ಮೂಲೆ ಮೂಲೆಗಳಲ್ಲಿ ನಡೆಯುವ ಮಾಹಿತಿಗಳನ್ನು ಜನರಿಗೆ ತಲುಪಿಸುವುದು ಅಂದಿನ ಪತ್ರಿಕೆಗಳ ಮೂಲ ಉದ್ದೇಶವಾಗಿತ್ತು. ಬಹಳಷ್ಟು ಸ್ವಾತಂತ್ರ್ಯ ಹೋರಾಟಗಾರರು ತಮ್ಮದೇ ಆದ ಪತ್ರಿಕೆಗಳನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಒಂದು ಗುರಿಯನ್ನು ಇಟ್ಟುಕೊಂಡು ಹೊರತಂದರು. ಇವರಲ್ಲಿ ಪ್ರಮುಖರಾಗಿ ರಾಜರಾಮ್ ಮೋಹನ್‌ರಾಯ್, ಮಹಾತ್ಮಗಾಂ, ಬಾಲಗಂಗಾಧರ ತಿಲಕ್, ಡಾ. ಬಿ.ಆರ್. ಅಂಬೇಡ್ಕರ್, ಎಂ. ವೆಂಕಟಕೃಷ್ಣಯ್ಯ (ತಾತಯ್ಯ) ಮೊದಲಾದವರು ಸೇರಿದ್ದಾರೆ ನಂಜನಗೂಡಿನ ತಿರುಮಲಾಂಬ ರಾಜ್ಯದ ಮೊದಲ ಮಹಿಳಾ ಪತ್ರಕರ್ತೆ ಎನಿಸಿಕೊಂಡಿದ್ದರು ಎಂದರು.
ಪ್ರಾಂಶುಪಾಲರಾದ ಡಾ. ಬಿ. ಆರ್. ಜಯಕುಮಾರಿ ಮಾತನಾಡಿದರು. ಪ್ರಾಧ್ಯಾಪಕಿ ಡಾ. ಸುಕನ್ಯಾ, ನಿವೃತ್ತ ಪ್ರಾಧ್ಯಾಪಕ ಡಾ. ಎಸ್. ನರೇಂದ್ರಪ್ರಸಾದ್ ಉಪನ್ಯಾಸ ನೀಡಿದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರ ಹಾಗೂ ಕಾರ್ಯನಿರ್ವಾಹಣಾಕಾರಿ ಡಾ. ಎಸ್.ಆರ್. ರಮೇಶ್, ಶೈಕ್ಷಣಿಕ ಡೀನ್ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಚ್. ಶ್ರೀಧರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಎಲ್. ರವಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್.ಆರ್. ತಿಮ್ಮೇಗೌಡ ಉಪಸ್ಥಿತರಿದ್ದರು.