

ಮೈಸೂರು: ಪತ್ರಿಕೆ ವಿತರಣೆ ಮಾಡುವವರು ದೇಶದ ಮೊದಲ ಪ್ರಜೆ ಸಹ ಆಗಬಹುದು ಎಂಬುದಕ್ಕೆ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರೇ ಸಾಕ್ಷಿ ಎಂದು ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಮೈಸೂರು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋತ್ಸವ ಭವನದ ‘ತಾತಯ್ಯನವರ ವೇದಿಕೆ’ಯಲ್ಲಿ ಗುರುವಾರ ಆಯೋಜಿಸಿದ್ದ 5ನೇ ರಾಜ್ಯ ಪತ್ರಿಕಾ ವಿತರಕರ ಸಮ್ಮೇಳನ ಹಾಗೂ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಅಬ್ದುಲ್ ಕಲಾಂ ಬಾಲ್ಯದಲ್ಲಿ ಬಡತನದಲ್ಲಿ ಇದ್ದಂತಹ ಸಂದರ್ಭದಲ್ಲಿ ಅವರು ಪತ್ರಿಕೆಯನ್ನು ಮನೆ ಮನೆಗೆ ಹಂಚುವ ಕಾರ್ಯ ಮಾಡುತ್ತಿದ್ದರು. ಅವರು ತಮ್ಮ ಕೆಲಸವನ್ನು ಪ್ರೀತಿ, ಶ್ರದ್ಧೆಯಿಂದ ಮಾಡಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಹುದ್ದೆಗೆ ಏರಿದರು ಎಂದು ಸ್ಮರಿಸಿದರು.
ಮಳೆ, ಗಾಳಿ, ಚಳಿ ಏನೇ ಇರಲಿ, ಯಾವುದನ್ನೂ ಲೆಕ್ಕಿಸದೆ ಮನೆ ಮನೆಗಳಿಗೆ ಪತ್ರಿಕೆ ಹಂಚಿಕೆ ಮಾಡುವ ಮಹತ್ವದ ಜವಾಬ್ದಾರಿ ನಿಮ್ಮ ಮೇಲಿದೆ. ಅಮೆರಿಕದಲ್ಲಿ ಪತ್ರಿಕೆಗಳನ್ನು ಮನೆ ಬಾಗಿಲಿಗೆ ತಲುಪಿಸುವುದಿಲ್ಲ, ಮನೆ ಮುಂದಿನ ಫುಟ್‌ಪಾತ್‌ನಲ್ಲಿ ಇಟ್ಟು ಹೋಗುತ್ತಾರೆ. ಆದರೆ, ನಮ್ಮ ವಿತರಕರು ಸರಿಯಾಗಿ ಮನೆ ಬಾಗಿಲಿಗೆ ತಲುಪಿಸುತ್ತಾರೆ. ಇದು ಸಂತೋಷದ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಿಕಾ ವಿತರಕರು ಸಂಘ ರಚಿಸಿರುವುದು ಸಂತೋಷದ ವಿಚಾರ. ಕಲಿಯುಗದಲ್ಲಿ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲು ಸಂಘದ ಅವಶ್ಯಕತೆ ಇದೆ. ಸಂಘದ ಮೂಲಕ ನಿಮ್ಮ ಸಮಸ್ಯೆಗಳನ್ನು ಸಂಬಂಧಿಸಿದವರ ಗಮನ ಸೆಳೆಯುವ ಕಾರ್ಯ ಮಾಡಬೇಕು ಸಲಹೆ ನೀಡಿದರು.
ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ, ಪತ್ರಿಕಾ ವಿತರಕರು ಮುದ್ರಣ ಮಾಧ್ಯಮದ ಬೆನ್ನೆಲುಬು. ಒಬ್ಬ ಪತ್ರಿಕಾ ವಿತರಕನಿಗೆ ತಿಂಗಳಿಗೆ ಸಿಗುವುದು ಕೆಲವೇ ಸಾವಿರ ರೂಪಾಯಿ ಇರಬಹುದು. ಆದರೆ, ಸಾವಿರಾರು ಪತ್ರಿಕಾ ವಿತರಕರು ಸಂಗ್ರಹಿಸುವ ಚಂದಾ ಹಣ ಮತ್ತು ಸಣ್ಣ ಪ್ರಮಾಣದ ಜಾಹಿರಾತು ಹಣ ಎಲ್ಲವನ್ನು ಒಟ್ಟು ಲೆಕ್ಕ ಹಾಕಿದರೆ ಹತ್ತಾರು ಕೋಟಿ ರೂ. ಆಗುತ್ತದೆ. ಹೀಗಾಗಿ ಪತ್ರಿಕೋದ್ಯಮದ ಮತ್ತು ರಾಜ್ಯದ ಆರ್ಥಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿರುವ ಪ್ರಮುಖ ಸಮುದಾಯವಾಗಿದೆ ಎಂದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಿಕಾ ವಿತರಕರ ಸಮಸ್ಯೆಗಳಿಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಜ್ಯ ಸರ್ಕಾರ ಸ್ಪಂದಿಸುತ್ತಾ ಬಂದಿದೆ. ಪತ್ರಿಕಾ ವಿತರಕರು ಆಸ್ಪತ್ರೆಗೆ ದಾಖಲಾದರೆ 1 ಲಕ್ಷ ರೂ., ಮೃತಪಟ್ಟರೆ 2 ಲಕ್ಷ ರೂ. ಪರಿಹಾರ ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಪತ್ರಿಕಾ ವಿತರಕರ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದರು.
ಈ ಸಂದರ್ಭ ಪತ್ರಿಕಾ ಹಿರಿಯ ಓದುಗರಾದ ಕೃಷ್ಣಪ್ಪ, ಗುರುಸ್ವಾಮಿ, ಪ್ರಭಾಕರ್, ಕಾಳಿಹುಂಡಿ ಕೆ.ವಿಶುಕುಮಾರ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಸಮ್ಮೇಳನಾಧ್ಯಕ್ಷ ಎಂ.ಎನ್. ನಾಗರಾಜ್, ರಾಜ್ಯ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಕೆ. ಶಂಭುಲಿಂಗ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಜೆ.ಎಸ್. ಹೋಮದೇವ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಮಾಜಿ ಜಿಲ್ಲಾಧ್ಯಕ್ಷರಾದ ಅಂಶಿ ಪ್ರಸನ್ನ ಕುಮಾರ್, ಸಿ.ಕೆ. ಮಹೇಂದ್ರ, ರವಿ ಕುಮಾರ್, ವಿಜಯವಾಣಿ ಮೈಸೂರು ಆವೃತ್ತಿಯ ಸ್ಥಾನಿಕ ಸಂಪಾದಕ ಎಂ.ಆರ್. ಸತ್ಯನಾರಾಯಣ, ಹಿರಿಯ ಪತ್ರಕರ್ತರಾದ ಸುಬ್ರಹ್ಮಣ್ಯ, ರಾಘವೇಂದ್ರ, ಎಸ್. ನಾಗಣ್ಣ, ಶ್ರೀಧರ್, ಟಿ.ಎಸ್. ಗೋಪಿನಾಥ್, ಪ್ರಕಾಶ್, ಸರ್ವಜನಾಂಗ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವೇಣುಗೋಪಾಲ್ ಹಾಗೂ ಇತರರು ಇದ್ದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಈ ಸಂದರ್ಭ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಪತ್ರಿಕಾ ವಿತರಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಥೆರೇಸಾ ಡೆಲ್ಸಿ, ಆರ್. ಪೂರ್ವಿಕಾ, ಪಿ. ಅಮೂಲ್ಯ, ಕೀರ್ತನಾ, ಜಿ.ಕೆ. ಕೌಸ್ತುಭ ಗಂಗೋತ್ರಿ, ಕೆ.ಎಸ್. ಸೃಜನ್ , ಕಾವ್ಯ ಗೋವಿಂದ ಆಚಾರಿ, ಸಿ. ವಿನಯ್, ಬಿ.ಚಿನ್ಮಾಯಿ, ಮಮತಾ ಜೆ. ಬಣಕಾರ್, ಭಾಸ್ಕರ್, ಕಾವಸರ ಪ್ರೇಮ, ಸಂಜನಾ ವಿ. ಢಾಗೆೆ, ಅಂಕಿತಾ ನೀಲಪ್ಪ ಕುಂದಗೋಳ್, ಕೆ. ಪುನೀತ್‌ರಾಜ್, ಶಮೀದ್‌ಸಾಬ್,ಶಿವನಗೌಡ, ಚೈತ್ರಾ, ಸಿಂಚನಾ ಬಸವಾನಂದ್, ಮೌಲ್ಯಾ ನಾಯಕ್, ಎನ್. ಸಂಜನಾ, ಜ್ಞಾನೇಶ್ವರಿ, ಎಂ. ವ್ನಿೇಶ್, ಎಂ. ಭರತ್ ಕುಮಾರ್, ಎನ್. ಚೈತ್ರಾ, ಪಿ. ಪ್ರಕೃತಿ, ಎನ್. ಹಿರಿಣ್ಮಯಿ, ಎಂ. ದಾರುಣ್, ವಿನಾಯಕ ರವಿ, ಅಂಕಿತಾ ಮೆಣಸಿನಕಾಯಿ, ಎಚ್.ಎ. ಪವಿತ್ರಾ, ಎಸ್. ಚಂದನಾ, ಚಂದನ್, ಶಿವಕುಮಾರ್ ಪ್ರತಿಭಾ ಪುರಸ್ಕಾರ ಸ್ವೀಕರಿಸಿದರು.