ವರ್ತೂರ್ ಸಂತೋಷ್​ ಬಂಧನ ಪ್ರಕರಣ; ಮತ್ತಿಬ್ಬರಿಗೆ ನೋಟಿಸ್​ ಕಳುಹಿಸಿದ ಅರಣ್ಯ ಇಲಾಖೆ, ಚುರುಕುಗೊಂಡ ತನಿಖೆ

varthur santhosh
Published on

ಬೆಂಗಳೂರು: ಚಿನ್ನದ ಸರದಲ್ಲಿ ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ಬಿಗ್‌ ಬಾಸ್ ಸೀಸನ್ 10 ಸ್ಪರ್ಧಿ ವರ್ತೂರು ಸಂತೋಷ್​​ರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಿಂದ ಸಂತೋಷ್ ಅವರನ್ನು ಕರೆತಂದಿರುವ ರಾಮೋಹಳ್ಳಿ ಅರಣ್ಯಾಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರಿಗೆ ಸಂಕಷ್ಟ ಎದುರಾಗಿದೆ. ಹೌದು, ಅರಣ್ಯ ಇಲಾಖೆ ಸಂತೋಷ್ ಆಪ್ತ ರಂಜಿತ್ ಹಾಗೂ ಚಿನ್ನದಂಗಡಿ ಮಾಲೀಕನಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಮೂಲಗಳ ಪ್ರಕಾರ ತನಿಖೆಯ ಸಂದರ್ಭದಲ್ಲಿ ಸಂತೋಷ್​, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಸ್ಪಷ್ಟ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ. ಲಾಕೇಟ್ ಮಾಡಿಕೊಟ್ಟ ಚಿನ್ನದ ಅಂಗಡಿ ಮಾಲೀಕ ಹೊಸೂರು ಮೂಲದ ವರ್ತೂರಿವರಾಗಿದ್ದು, ಈ ಹಿನ್ನಲೆಯಲ್ಲಿ ಹುಲಿ ಉಗುರು ಮೂಲ ಕೆದಕಲು ಅರಣ್ಯ ಇಲಾಖೆ ತನಿಖೆ ಮುಂದುವರಿದೆ.

ವರ್ತೂರು ಸಂತೋಷ್​​ರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ತಡರಾತ್ರಿ ಅರೆಸ್ಟ್ ಮಾಡಿದ್ದರು. ಕೊರಳಿಗೆ ಹುಲಿ ಉಗುರಿನ ಲಾಕೇಟ್ ಹಾಕೊಂಡಿದ್ದ ಕಾರಣಕ್ಕೆ ಬಿಗ್‌ಬಾಸ್‌ ಮನೆಯಿಂದಲೇ ಅರೆಸ್ಟ್ ಮಾಡಲಾಗಿತ್ತು. ಸದ್ಯ ಕೋರ್ಟ್ ಸಂತೋಷ್​​ಗೆ 14 ದಿವಸ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಇನ್ನು ಸಂತೋಷ್ ಕುಟುಂಬಸ್ಥರು, ಕೊರಳಿನಲ್ಲಿದ್ದದ್ದು ಹುಲಿ ಉಗುರು ಎಂದು ನಮಗೆ ಗೊತ್ತಿರಲಿಲ್ಲ ಎಂದಿದ್ದಾರೆ. ವರ್ತೂರು ಸಂತೋಷ್ ಪರ ವಕೀಲ ನಟರಾಜ್‌, ಜಾಮೀನು ಅರ್ಜಿ ಹಾಕಿದ್ದೀವಿ‌. ಬುಧವಾರ ವಿಚಾರಣೆ ಇದೆ. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಕೊರಳಿನಲ್ಲಿದ್ದ ಲಾಕೇಟ್ ಹುಲಿಯದ್ದು ಅಂತ ಹೇಳ್ತಿದ್ದಾರೆ. ತಜ್ಞರು ಪರಿಶೀಲನೆ ನಡೆಸಿ ವರದಿ ಬಂದ ಬಳಕ ಗೊತ್ತಾಗಲಿದೆ ಎಂದಿದ್ದಾರೆ.

ಸಂತೋಷ್‌ ಧರಿಸಿದ ಲಾಕೆಟ್ ಮಾಡಿದವರು ಯಾರು? ಹುಲಿ ಉಗುರು ಸಿಕ್ಕಿದ್ದು ಎಲ್ಲಿ? ಯಾವುದಾದರೂ ಅರಣ್ಯದಲ್ಲಿ ಹುಲಿ ಬೇಟೆ ಆಗಿದೆಯಾ? ಎಂಬಿತ್ಯಾದಿ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ತನಿಖೆ ಚುರುಕುಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net