ಇಷ್ಟಪಟ್ಟವನ ಬದಲು ಬೇರೊಬ್ಬನೊಂದಿಗೆ ಬಲವಂತದ ವಿವಾಹ, ನೊಂದ ನವವಿವಾಹಿತೆ ಆತ್ಮಹತ್ಯೆ

Sucide-1
Published on

ಉಳ್ಳಾಲ: 15 ದಿನಗಳ ಹಿಂದೆ ದಾಂಪತ್ಯ ಜೀವನ ಪ್ರವೇಶಿಸಿದ್ದ ಯುವತಿ ಸೋಮವಾರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇಷ್ಟಪಟ್ಟವನ ಬದಲು ಮನೆಯವರೇ ನೋಡಿದ ಹುಡುಗನೊಂದಿಗೆ ಬಲವಂತದ ಮದುವೆ ಮಾಡಿದ್ದೇ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.

ಅಂಬ್ಲಮೊಗರು ಗ್ರಾಮದ ಕೋಟ್ರಗುತ್ತು ನಿವಾಸಿ ರಶ್ಮಿ ವಿಶ್ವಕರ್ಮ(24) ಮೃತ ಯುವತಿ. ಆ.21ರಂದು ಈಕೆಯ ವಿವಾಹ ಗಂಜಿಮಠ ನಿವಾಸಿ, ದುಬೈಯಲ್ಲಿ ಇಂಜಿನಿಯರ್ ಆಗಿರುವ ಸಂದೀಪ್ ಎಂಬುವರ ಜತೆ ನಡೆದಿತ್ತು. ಏಳು ತಿಂಗಳ ಹಿಂದೆ ಇವರ ವಿವಾಹ ನಿಶ್ಚಯವಾಗಿತ್ತು. ಮನೆಮಂದಿಯ ಒತ್ತಾಯಕ್ಕೆ ಮಣಿದು ವಿವಾಹವಾಗಿದ್ದು, ಮದುವೆ ಬಳಿಕ ಪತಿಯ ಮನೆಗೆ ಹೋಗದೆ ತವರಲ್ಲೇ ಇದ್ದಳು ಎನ್ನಲಾಗಿದೆ. ಸೆ.3ರಂದು ಮಂಗಳೂರಿನ ಕೋಡಿಕಲ್‌ನಲ್ಲಿರುವ ರಶ್ಮಿಯ ಅಕ್ಕನ ಮನೆಯಲ್ಲಿ ನವದಂಪತಿಗೆ ಔತಣಕೂಟ ಏರ್ಪಡಿಸಿದ್ದರು. ಅಂದು ಬೆಳಗ್ಗೆ ಯುವತಿ ತಾನು ಇಲಿ ಪಾಷಾಣ ಸೇವಿಸಿರುವುದಾಗಿ ಮನೆಯವರಲ್ಲಿ ಹೇಳಿದ್ದಳು. ಕೆಲವೇ ಕ್ಷಣದಲ್ಲಿ ವಾಂತಿ ಮಾಡಿ ಅಸ್ವಸ್ಥಳಾಗಿದ್ದ ಆಕೆಯನ್ನು ದೇರಳಕಟ್ಟೆ ಅಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ ಮೃತಪಟ್ಟಿದ್ದಾಳೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net