

ಬೆಳಗಾವಿ: ಇಲ್ಲಿನ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್ ) ಯ ಜಿಲ್ಲಾಸ್ಪತ್ರೆ ಹೆರಿಗೆ ವಾರ್ಡ್‌ನಲ್ಲಿ ಬುಧವಾರ ನವಜಾತ ಶಿಶುವನ್ನು ತಾಯಿ ಆಸ್ಪತ್ರೆಯಲ್ಲೇ ಬಿಟ್ಟು ಹೋಗಿದ್ದಳು. ಇದೇ ಮಗುವನ್ನು ತೂಕ ಕಡಿಮೆ ಇದೆ ಎಂಬ ಕಾರಣಕ್ಕೆ ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಆದರೆ, ಈ ನವಜಾತ ಶಿಶು ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದೆ. ಬೈಲಹೊಂಗಲ ಪಟ್ಟಣದ ಬಿಬಿಜಾನ್ ಸಯ್ಯದ್ (28) ಅವರ ಮಗು ಮೃತಪಟ್ಟಿದೆ.
ಘಟನೆ ವಿವರ: ಮನೆಯಲ್ಲಿ ಕಾಲು ಜಾರಿ ಬಿದ್ದರಿಂದ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಬಿಬಿಜಾನ್ ಸದ್ದಾಂ ಸಯ್ಯದ್ ಅವರಿಗೆ ತೀವ್ರ ನೋವು ಕಾಣಿಸಿಕೊಂಡ ಕಾರಣಕ್ಕೆ ವೈದ್ಯರು ಬೆಳಗಾವಿ ಬಿಮ್ಸ್‌ಗೆ ಶಿಫಾರಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಡಿ.8ರಂದು ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ಗೆ ದಾಖಲಾಗಿದ್ದರು. ಅದೇ ದಿನ ರಾತ್ರಿ ಹೆರಿಗೆಯಾಗಿತ್ತು. ಅವಧಿ ಪೂರ್ವ ಹೆರಿಗೆ ಹಿನ್ನೆಲೆಯಲ್ಲಿ 735 ಗ್ರಾಂನಷ್ಟು ಇದ್ದ ಮಗುವಿನ ತೂಕ ಕಡಿಮೆ ಆಗಿರುವ ಕಾರಣಕ್ಕೆ ವೈದ್ಯರು ಎನ್‌ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದರು. ಉಸಿರಾಟದ ಸಮಸ್ಯೆ, ತೂಕ ಕಡಿಮೆ ಕಾರಣಕ್ಕೆ ವೆಂಟಿಲೇಟರ್‌ನಲ್ಲಿಟ್ಟು ಶಿಶು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಇದೇ ಮಗುವಿನ ತಾಯಿ ಹೆಣ್ಣು ಮಗು ಎಂಬ ಕಾರಣಕ್ಕೂ, ಅವಧಿ ಪೂರ್ವದಲ್ಲಿ ಜನಿಸಿದ ಮಗು ಎಂಬ ಕಾರಣಕ್ಕೂ ಬುಧವಾರ ಜಿಲ್ಲಾಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿದ್ದರು. ಈ ಕುರಿತು ಎಪಿಎಂಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಾಯಿಗಾಗಿ ಹುಡಾಕಾಟ ನಡೆಸುತ್ತಿದ್ದಾರೆ.
ಮನೆಯಲ್ಲಿ ಗರ್ಭಿಣಿ ಕಾಲು ಜಾರಿ ಬಿದ್ದು, ತೀವ್ರ ನೋವಿನ ಕಾರಣಕ್ಕೆ ಬೈಲಹೊಂಗಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಬಿಮ್ಸ್ ಗೆ ಕರೆ ತರಲಾಗಿತ್ತು. ಮಗುವಿನ ಅಂಗಾಂಗ ಬೆಳವಣಿಗೆ ಆಗಿರಲಿಲ್ಲ, ಆದರೂ ಸಮರ್ಪಕ ಚಿಕಿತ್ಸೆ ನೀಡಲಾಗಿತ್ತು. ನವಜಾತ ಶಿಶುವನ್ನು ಆಸ್ಪತ್ರೆಯಲ್ಲಿ ಬಿಟ್ಟು ತಾಯಿ ಪರಾರಿ ಆಗಿದ್ದು ದುರ್ದೈವ. ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ತನಿಖೆ ನಡೆಯುತ್ತಿದೆ. | ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ