

ಹೊಸೂರು: ದಾದಿಯರ ಎಡವಟ್ಟಿಗೆ ನವಜಾತು ಶಿಶುವಿನ ಕೈ ಮುರಿದ ಘಟನೆ ಕೃಷ್ಣಗಿರಿ ಜಿಲ್ಲೆ ಉದ್ದನಪಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಏನಿದು ಪ್ರಕರಣ?: ಹೊಸೂರು ನಗರದ ಕೊತ್ತೂರಿನ ಕೂಲಿಕಾರ್ಮಿಕ ಶಿವಕುಮಾರ್ ಎಂಬುವರ ಪತ್ನಿ ವಸಂತ ಅವರಿಗೆ ಬುಧವಾರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಹತ್ತಿರದ ಉದ್ಧನಪಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಈ ವೇಳೆ ಆಸ್ಪತ್ರೆ ವೈದ್ಯೆ ಗೈರಾಗಿದ್ದರು. ಆಗ ದಾದಿಯರೇ ಹೆರಿಗೆ ಮಾಡಿಸಿದ್ದರು. ಈ ವೇಳೆ ಕೈ ಮುರಿದಿದ್ದು, ಮಗುವಿನ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ. ತಕ್ಷಣ ಆಂಬುಲೆನ್ಸ್ ಮೂಲಕ ಹೊಸೂರು ಸರ್ಕಾರಿ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿದೆ.
ಆಸ್ಪತ್ರೆಗೆ ಬಳಿ ಗಲಾಟೆ: ಗಂಡು ಮಗು ಜನಿಸಿದ ಸಂಭ್ರಮದಲ್ಲಿದ್ದ ಸಂಬಂಧಿಗಳಿಗೆ ಮಗುವಿನ ಕೈ ಮುರಿದಿರುವ ಸುದ್ದಿ ಕೇಳಿ ಆಘಾತವಾಗಿದೆ. ಪ್ರಸವದ ವೇಳೆ ವೈದ್ಯರಿಲ್ಲದ ಕಾರಣ ದಾದಿಯರೇ ಹೆರಿಗೆ ಮಾಡಿಸಿದರು. ಆದರೆ ಅವರಿಗೆ ಅನುಭವ ಕೊರತೆಯಿಂದ ಎಡವಟ್ಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಂಬಂಧಿಕರು, ಆಸ್ಪತ್ರೆ ಆವರಣದಲ್ಲಿ ಗಲಾಟೆ ಮಾಡಿದರು. ಪರಿಸ್ಥಿತಿ ಪ್ರಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಮಾಧಾನಗೊಳಿಸಿದರು. ಮಗು ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಪಾಲಕರು ಹೊಸೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.