

ಬೆಂ. ಗ್ರಾಮಾಂತರ/ದೊಡ್ಡಬಳ್ಳಾಪುರ: ಹೊಸ ವರ್ಷದಿಂದ ಎಸ್ಸೆಸ್ಸೆಲ್ಸಿ ಶಾಲೆಗಳ ಪುನರಾರಂಭಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ದೊರೆಯುತ್ತಿದ್ದಂತೆ ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ಗರಿಗೆದರಿದೆ. ನಾಲ್ಕೂ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ ನಿರ್ದೇಶನದಂತೆ ಈಗಾಗಲೇ ಪೂರ್ವಸಿದ್ಧತಾ ಸಭೆ ನಡೆಯುತ್ತಿವೆ.
ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಜ.1ರಿಂದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ದೈನಂದಿನ ತರಗತಿ ಹಾಗೂ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ‘ವಿದ್ಯಾಗಮ’ ಯೋಜನೆಯಡಿ ಶಾಲೆಗಳನ್ನು ಪುನರಾರಂಭಿಸಲು ಪೂರ್ವ ಸಿದ್ಧತೆ ಅರಂಭಿಸಿದೆ. ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ವ್ಯಾಪ್ತಿಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಈಗಾಗಲೇ ನೋಟಿಸ್ ವಿತರಿಸಿದ್ದು, ಪಾಲಕರ ಸಭೆ, ಮುಖ್ಯಶಿಕ್ಷಕರು ಹಾಗೂ ಶಾಲಾ ಶಿಕ್ಷಕರ ಸರಣಿ ಸಭೆಗಳನ್ನು ಆರಂಭಿಸಿದೆ.
ಸಾಂಪ್ರದಾಯಿಕ ಸ್ವಾಗತ: ಪ್ರಸಕ್ತ ಸಾಲಿನಲ್ಲಿ 1.60 ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲಿದ್ದು, ಹೊಸವರ್ಷದ ದಿನಂದಂದು ಶಾಲಾ ಸಿಬ್ಬಂದಿ ಸಾಂಪ್ರದಾಯಿಕ ಉಡುಗೆ ಧರಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಿದ್ದಾರೆ. ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಹೊಸವರ್ಷವನ್ನು ಶೈಕ್ಷಣಿಕ ಹಬ್ಬವಾಗಿ ಆಚರಿಸಲು ಚಿಂತನೆ ನಡೆಸಲಾಗಿದೆ. ಸುದೀರ್ಘ ರಜೆ ಕಾರಣದಿಂದ ಶಾಲೆಗಳಿಂದ ದೂರವೇ ಉಳಿದ ವಿದ್ಯಾರ್ಥಿಗಳನ್ನು ವಿಶೇಷವಾಗಿ ಶಾಲೆಗೆ ಬರಮಾಡಿಕೊಳ್ಳಲು ಸಿದ್ಧತೆ ನಡೆಸಲಾಗಿದೆ.
ಶಾಲೆಗಳಿಗೆ ಸೋಂಕು ನಿವಾರಕ: ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸಿ ಸೋಂಕು ನಿವಾರಣೆ ಸಿಂಪಡಿಸುವಂತೆ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.
ಪ್ರತಿ ಶಾಲೆಯಲ್ಲಿ ಥರ್ಮಲ್ ಸ್ಕ್ಯಾನಿಂಗ್, ಪ್ರತಿ ವಿದ್ಯಾರ್ಥಿಗೂ ಮಾಸ್ಕ್ ವಿತರಿಸಲಾಗುತ್ತದೆ. ಮಕ್ಕಳಿಗೆ ಜ್ವರ, ಕೆಮ್ಮು ಕಂಡು ಬಂದಲ್ಲಿ ಶೀಘ್ರವೇ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ದೊರಕಿಸಿಕೊಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿ ತರಗತಿಗೆ 18 ರಿಂದ 20 ವಿದ್ಯಾರ್ಥಿಗಳಿಗೆ ಅವಕಾಶವಿದ್ದು, 20ಕ್ಕಿಂತ ಹೆಚ್ಚು ಹಾಜರಾತಿ ಕಂಡುಬಂದರೆ ಮತ್ತೊಂದು ಕೊಠಡಿಗೆ ವರ್ಗಾಯಿಸಲಾಗುವುದು. ಆದರೆ ಈ ಬಾರಿ ಪ್ರಾರ್ಥನೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇರುವುದಿಲ್ಲ.
ಮಧ್ಯಾಹ್ನದ ಬಿಸಿಯೂಟ ರದ್ದು ಮಾಡಲಾಗಿದೆ. ಪ್ರತಿ ಶಾಲೆಯಲ್ಲಿ ಬಿಸಿ ನೀರಿನ ವ್ಯವಸ್ಥೆ, ಪಾಲಕರಿಂದ ಅನುಮತಿ ಪತ್ರ ಕಡ್ಡಾಯ ಮಾಡಲಾಗಿದೆ.
ಜಿಲ್ಲೆಯಲ್ಲಿನ ಶಾಲೆ ವಿವಿವರ
ಪ್ರಾಥಮಿಕ ಸರ್ಕಾರಿ ಶಾಲೆ 435
ಪ್ರೌಢಶಾಲೆ 63
ಅನುದಾನಿತ ಪ್ರಾಥಮಿಕ ಶಾಲೆ 15
ಅನುದಾನಿತ ಪ್ರೌಢಶಾಲೆ 49
ಖಾಸಗಿ ಪ್ರಾಥಮಿಕ ಶಾಲೆಗಳು 45
ಖಾಸಗಿ ಪ್ರೌಢಶಾಲೆ 185
ಜ.1 ರಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತರಗತಿ ಹಾಗೂ 1 ರಿಂದ 9ನೇ ತರಗತಿಗೆ ವಿದ್ಯಾಗಮ-2 ಯೋಜನೆಯಡಿ ತರಗತಿ ಆರಂಭವಾಗಲಿದೆ. ಎಲ್ಲ ಶಾಲೆಗಳು ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು, ನಿರ್ಲಕ್ಷ್ಯ ಕಂಡುಬಂದರೆ ಕ್ರಮಕೈಗೊಳ್ಳಲಾಗುವುದು. ಗಂಗಮಾರೇಗೌಡ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕರೊನಾ ಹಾವಳಿ ನಡುವೆಯೂ ಯಶಸ್ವಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲಾಗಿತ್ತು. ಅದೇ ಮಾದರಿಯಲ್ಲಿ ಶಾಲೆಗಳ ಪುನರಾರಂಭದ ಬಳಿಕವೂ ಎಚ್ಚರಿಕೆ ವಹಿಸಲಾಗುವುದು. ಇದಕ್ಕೆ ಸಂಬಂಧಪಟ್ಟಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೈಯಪ್ಪರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ, ದೊಡ್ಡಬಳ್ಳಾಪುರ ಹೊಸವರ್ಷವನ್ನು ಈ ಬಾರಿ ಶೈಕ್ಷಣಿಕ ಹಬ್ಬದ ಮಾದರಿ ಆಚರಿಸಲು ಚಿಂತಿಸಲಾಗಿದೆ. ಸುದೀರ್ಘ ಕಾಲ ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳಲ್ಲಿ ಹೊಸ ಹುರುಪು ಮೂಡಿಸುವ ನಿಟ್ಟಿನಲ್ಲಿ ಸಿಬ್ಬಂದಿ ಸಾಂಪ್ರದಾಯಿಕ ಉಡುಗೆಯೊಂದಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಿದ್ಧತೆ ನಡೆಸಲಾಗಿದೆ. ಕನ್ನಯ್ಯ, ಬಿಇಒ ಹೊಸಕೋಟೆ