ಸಮಾಜದ ಸ್ವಾಸ್ಥಕ್ಕೆ ಸಾಂಸ್ಕೃತಿಕತೆ ಅಗತ್ಯ: ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಸಲಹೆ

07_01_Mdy_04(Sanmana)
Published on

ಮಂಡ್ಯ: ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಾಂಸ್ಕೃತಿಕತೆ ಅಗತ್ಯ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಅಭಿಪ್ರಾಯಪಟ್ಟರು.

ನಗರದ ವಿದ್ಯಾಗಣಪತಿ ದೇವಾಲಯದ ಹೊಯ್ಸಳ ಸಭಾಂಗಣದಲ್ಲಿ ಶ್ರೀರಂಜಿನಿ ಕಲಾವೇದಿಕೆ, ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್, ಕರ್ನಾಟಕ ರಕ್ಷಣಾ ವೇದಿಕೆ, ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಹೊಸ ವರ್ಷದ ಅಂಗವಾಗಿ ಆಯೋಜಿಸಿದ್ದ ಗಣ್ಯರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬದಲಾದ ಪರಿಸ್ಥಿತಿಯಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಮಹತ್ತರ ಜವಾಬ್ದಾರಿ ನಾಗರಿಕರ ಮೇಲಿದೆ. ಇದಕ್ಕಾಗಿ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕಿದೆ. ಮನುಷ್ಯ ಶಾಂತಿಯುತ ಮತ್ತು ಆರೋಗ್ಯಕರ ಜೀವನ ನಡೆಸಲು ಸಾಂಸ್ಕೃತಿಕ ಚಟುವಟಿಕೆಗಳು ಪೂರಕವಾಗಿವೆ ಎಂದು ಹೇಳಿದರು.

ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಕರವೇ ಜಿಲ್ಲಾಧ್ಯಕ್ಷ ಕೆ.ಟಿ.ಶಂಕರೇಗೌಡ ಮಾತನಾಡಿದರು. ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಅಧ್ಯಕ್ಷತೆ ವಹಿಸಿದ್ದರು. ಕಸಾಪ ನಗರ ಘಟಕದ ಅಧ್ಯಕ್ಷ ಸುಜಾತಾ ಕೃಷ್ಣ, ಮನ್‌ಮುಲ್ ಮಾಜಿ ನಿರ್ದೇಶಕಿ ನೀನಾ ಪಟೇಲ್, ಇ-ಮಾಂಡವ್ಯ ಮೋಟಾರ್ಸ್‌ನ ಮಾಲೀಕ ಎಂ.ವಿನಯ್‌ಕುಮಾರ್, ದೀಕ್ಷಿತ್ ನಾಯಕ್ ಭಾಗವಹಿಸಿದ್ದರು.

ಇದೇ ವೇಳೆ ತಗ್ಗಹಳ್ಳಿ ವೆಂಕಟೇಶ್, ಸಿ.ಕೆ.ನರಸಿಂಹಸ್ವಾಮಿ, ಸಿ.ಕೆ.ರವಿಕುಮಾರ ಚಾಮಲಾಪುರ, ಮಂಜುನಾಥ ಶಾಸ್ತ್ರಿ, ಕೆ.ಪಿ.ಅರುಣಕುಮಾರಿ, ಎನ್.ತಮ್ಮಣ್ಣ ಅವರನ್ನು ಅಭಿನಂದಿಸಲಾಯಿತು. ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪಿ.ಎಂ.ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು. ಶ್ರೀರಂಜಿನಿ ಕಲಾ ವೇದಿಕೆ ಅಧ್ಯಕ್ಷ ಸಿ.ಪಿ.ವಿದ್ಯಾಶಂಕರ್, ಗಾಯಕ ಬಸವರಾಜು ಸಂಪಹಳ್ಳಿ ಅವರು ಭಕ್ತಿಸುಧಾ ಕಾರ್ಯಕ್ರಮ ನಡೆಸಿಕೊಟ್ಟರು. ಶಂಕರ ಸಂಗೀತ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಗಾಯನ, ಕೀಬೋರ್ಡ್ ವಾದನ ಎಲ್ಲರ ಮೆಚ್ಚುಗೆ ಗಳಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net