ಡಿಜೆ, ಡಾನ್ಸ್, ಪಾರ್ಟಿ ನಿಷೇಧ, ಹೊಸ ವರ್ಷ ಸಂಭ್ರಮ ಸರಳ ಆಚರಣೆಗೆ ಸೂಚನೆ

New Year 1 Jan 20
Published on

ಉಡುಪಿ: ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹೊಸವರ್ಷ ಸಂಭ್ರಮಾಚರಣೆಯನ್ನು ಸರಳವಾಗಿ ಆಚರಿಸಲು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಡಿ.30ರಿಂದ ಜ.2ರವರೆಗೆ ಕ್ಲಬ್, ಪಬ್, ರೆಸ್ಟೋರೆಂಟ್ ಹಾಗೂ ಅದೇ ತೆರನಾದ ಪ್ರದೇಶಗಳಲ್ಲಿ ಅಂತರವಿಲ್ಲದೆ ಹೆಚ್ಚು ಜನರು ಸೇರುವ, ಡಿಜೆ-ಡಾನ್ಸ್ ಕಾರ್ಯಕ್ರಮ, ವಿಶೇಷ ಪಾರ್ಟಿ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಕ್ಲಬ್, ಪಬ್, ರೆಸ್ಟೋರೆಂಟ್‌ಗಳನ್ನು ತೆರೆಯಲು ನಿರ್ಬಂಧವಿಲ್ಲ.

ಕ್ರಿಸ್‌ಮಸ್ ಆಚರಣೆ ಸಂಬಂಧಿಸಿ ಚರ್ಚ್‌ಗಳಲ್ಲಿ ಒಮ್ಮೆಲೆ ಹೆಚ್ಚು ಜನರು ಸೇರದಂತೆ ಅಂತರ ಕಾಯ್ದುಕೊಳ್ಳಲು ಮೇಲ್ವಿಚಾರಕರು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಹಬ್ಬದ ಆಚರಣೆ ಸಂದರ್ಭ ಹಸ್ತಲಾಘವ ಮತ್ತು ಆಲಿಂಗನ ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳ, ಮುಖ್ಯ ರಸ್ತೆಗಳಲ್ಲಿ ಸಾಮಾಜಿಕ ಅಂತರವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಜನರ ಸೇರುವಿಕೆಯನ್ನು ಹಾಗೂ ಸಂಭ್ರಮಾಚರಣೆ ನಿಷೇಧಿಸಲಾಗಿದೆ. ಈ ಸ್ಥಳಗಳಲ್ಲಿ ಪ್ರತಿನಿತ್ಯದ ಸಾಮಾನ್ಯ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಬಂಧವಿಲ್ಲ.

65 ವರ್ಷ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಇರಬೇಕು. ಸರ್ಕಾರದ ಮಾರ್ಗಸೂಚಿಯಂತೆ ಹಸಿರು ಪಟಾಕಿ ಮಾತ್ರ ಹಚ್ಚಬಹುದು. ಸರ್ಕಾರದ ವಿವಿಧ ಇಲಾಖೆ, ಪ್ರಾಧಿಕಾರಗಳ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net