ವರ್ಷಾಚರಣೆಗೆ ನಂದಿಬೆಟ್ಟಕ್ಕೆ ಪ್ರವೇಶವಿಲ್ಲ

30CBP1 (1)
Published on

ಚಿಕ್ಕಬಳ್ಳಾಪುರ:  ಹೊಸ ವರ್ಷಾಚರಣೆ ಹೆಸರಿನಲ್ಲಿ ಸಂಭವಿಸುವ ಅವಘಡಗಳನ್ನು ತಪ್ಪಿಸುವ ಉದ್ದೇಶದಿಂದ ನಂದಿ ಗಿರಿಧಾಮಕ್ಕೆ ಡಿ.31ರ ಸಂಜೆ 4ರಿಂದ ಜನವರಿ 1ರ ಬೆಳಗ್ಗೆ 8ರವರೆಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.

ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ನಂದಿ ಗಿರಿಧಾಮ ಒಂದು. ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ, ಅದರಲ್ಲೂ ಹೊಸ ವರ್ಷಾಚರಣೆ, ಪ್ರೇಮಿಗಳ ದಿನ, ಕ್ರಿಸ್‌ಮಸ್‌ನಂತಹ ವಿಶೇಷ ದಿನಗಳಲ್ಲಿ ಗೆಳೆಯರು, ಆತ್ಮೀಯರೊಂದಿಗೆ ಸಂಭ್ರಮಾಚರಣೆ ಕೈಗೊಳ್ಳಲು ಹಾತೊರೆಯುತ್ತಿರುತ್ತಾರೆ.

ಆದರೆ, ಇಲ್ಲಿನ ಟಿಪ್ಪುಡ್ರಾಪ್, ಗಿರಿಧಾಮ ಮೆಟ್ಟಿಲು, ಇಳಿಜಾರು ಅರಣ್ಯ ಪ್ರದೇಶ ಸೇರಿ ಅಪಾಯಕಾರಿ ಸ್ಥಳಗಳ ನಡುವೆ ಆಗಾಗ ಆತ್ಮಹತ್ಯೆ, ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪಾರ್ಟಿ, ಮೋಜು ಮಸ್ತಿಗೆ ಕಡಿವಾಣ ಹಾಕಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರವೇಶ ದ್ವಾರದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿದ್ದು ಬೆಟ್ಟದಲ್ಲಿ ಪೊಲೀಸ್, ಗೃಹರಕ್ಷಕದಳ ಮತ್ತು ಪ್ರವಾಸಿ ಮಾರ್ಗದರ್ಶಿ ಸಿಬ್ಬಂದಿ ನಿಯೋಜಿಸಲಾಗಿದೆ.

ಪ್ರವೇಶದ ಸಮಯ! :  ಹೊಸ ವರ್ಷದ ದಿನದ ರಾತ್ರಿ 12ರ ಕ್ಷಣದ ಸಂಭ್ರಮಕ್ಕೆ ಬ್ರೇಕ್ ಹಾಕಲಾಗಿದೆ. ಆದರೆ, ಜ.1ರ ಬೆಳಗ್ಗೆ 8ರ ಬಳಿಕ ಪ್ರವಾಸಿಗರು ಎಂದಿನಂತೆ ಗಿರಿಧಾಮಕ್ಕೆ ತೆರಳಲು ಅವಕಾಶ ಇದೆ. ಇಲ್ಲಿನ ಪ್ರವಾಸೋದ್ಯಮ ಇಲಾಖೆ, ಖಾಸಗಿ ಹೋಟೆಲ್‌ನಲ್ಲಿ ಹೊಸ ವರ್ಷಾಚರಣೆಗೆ ಅಂಗವಾಗಿ ವಿಶೇಷ ತಿಂಡಿ ತಿನಿಸು ವ್ಯವಸ್ಥೆಯೂ ಇರುತ್ತದೆ.

ರೆಸಾರ್ಟ್ ಬುಕ್ಕಿಂಗ್ ಫುಲ್ : ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿರುವುದು ಬೆಟ್ಟದ ತಪ್ಪಲಿನ ಖಾಸಗಿ ರೆಸಾರ್ಟ್‌ಗಳಿಗೆ ಲಾಭದಾಯಕವಾಗಿದ್ದು ಈಗಾಗಲೇ ಬಹುತೇಕ ಬುಕ್ಕಿಂಗ್ ಫುಲ್ ಆಗಿದೆ.
ದೇವನಹಳ್ಳಿ-ಕಾರಹಳ್ಳಿ, ನಂದಿ ಕ್ರಾಸ್-ಗಿರಿಧಾಮ ಮಾರ್ಗದಲ್ಲಿ 15 ರೆಸಾರ್ಟ್‌ಗಳಿವೆ. ಇದರಲ್ಲಿ ಬಹುತೇಕ ಅನಧಿಕೃತ. ಯಾವುದೇ ಪರವಾನಗಿ ಪಡೆಯದೇ ವ್ಯವಹಾರ ನಡೆಸುತ್ತಿವೆ. ಇದರ ನಡುವೆ ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಆಸ್ಟ್ರೇಲಿಯಾ, ಶ್ರೀಲಂಕಾ, ಇಂಗ್ಲೆಂಡ್ ಸೇರಿ ಹಲವು ರಾಷ್ಟ್ರಗಳಿಂದ ಪ್ರವಾಸಿಗರು ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಂಡು ಕುಟುಂಬ ಸಮೇತ ರೆಸಾರ್ಟ್‌ನಲ್ಲಿ ತಂಗುತ್ತಿದ್ದು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಎಲ್ಲವೂ ುಲ್‌ಆಗಿವೆ. ಬೇಡಿಕೆ ಹೆಚ್ಚಾದಂತೆ ಶೇ.30 ರಷ್ಟು ಶುಲ್ಕ ಸಹ ಏರಿಕೆಯಾಗಿದೆ.

ಸೀಮಿತ ಜನರ ನಡುವೆ ಪಾರ್ಟಿ:  ಟೆಕ್ಕಿಗಳು, ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಸೇರಿ ಹಲವರು ತಂಡೋಪತಂಡವಾಗಿ ರೆಸಾರ್ಟ್‌ಗಳಲ್ಲಿ ತಂಗುತ್ತಾರೆ. ರಾತ್ರಿ 12ರ ವೇಳೆ ಪಾರ್ಟಿ ಮುಗಿಸಿ, ಮರುದಿನ ಬೆಳಗ್ಗೆ ನಂದಿ ಗಿರಿಧಾಮದಲ್ಲಿ ಸುತ್ತಾಡಿ ಮತ್ತೆ ತಮ್ಮೂರುಗಳಿಗೆ ಮರಳುತ್ತಾರೆ. ಆದರೆ, ಪಾರ್ಟಿ, ನೃತ್ಯ ಎಲ್ಲವೂ ಒಳಗೊಳಗೆ ನಡೆಯುತ್ತದೆ, ಇನ್ನೂ ಹಲವೆಡೆ ಮದ್ಯ, ಹುಕ್ಕಾ ಅಮಲೇರಿಸಿಕೊಳ್ಳುವ ವ್ಯವಸ್ಥೆಯೂ ಇದೆ.

ಹೊಸ ವರ್ಷಾಚರಣೆ ದಿನದಂದು ರೆಸಾರ್ಟ್‌ನಲ್ಲಿ ತಂಗಲು ಈ ಬಾರಿ ಆನ್‌ಲೈನ್‌ನಲ್ಲಿ ಹೆಚ್ಚಿಗೆ ಗ್ರಾಹಕರು ಕೊಠಡಿ ಬುಕ್ಕಿಂಗ್ ಮಾಡಿದ್ದಾರೆ. ನಮ್ಮಲ್ಲಿ ಯಾವುದೂ ಖಾಲಿ ಇಲ್ಲ. 

ಹೆಸರು ಹೇಳಲು ಇಚ್ಚಿಸದ ರೆಸಾರ್ಟ್ ವ್ಯವಸ್ಥಾಪಕರು, ನಂದಿ

ಮುಂಜಾಗ್ರತಾ ಕ್ರಮವಾಗಿ ನಂದಿ ಗಿರಿಧಾಮಕ್ಕೆ ಡಿ.31ರ ಸಂಜೆ 4 ರಿಂದ ಜ.1ರ ಬೆಳಗ್ಗೆ 8ರವರೆಗೆ ಪ್ರವಾಸಿಗರಿಗೆ ಪ್ರವೇಶ ಇರುವುದಿಲ್ಲ. ನಿಯಮ ಉಲ್ಲಂಘಿಸುವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
ಅಭಿನವ ಖರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net