

ಮಂಡ್ಯ: ನಾವು ಸಂತೋಷವಾಗಿ ನೆಮ್ಮದಿಯಿಂದ ನಮ್ಮ ಮನಸ್ಸು ಹಾಗೂ ಆತ್ಮಕ್ಕೆ ತೃಪ್ತಿಯಾಗುವಂತೆ ಬದುಕಿದರೆ ಪ್ರತಿ ಕ್ಷಣವು ಹೊಸದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಹೊಸ ವರ್ಷದ ಅಂಗವಾಗಿ ಗಿಡನೆಟ್ಟು ಹಾಗೂ ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘದಿಂದ ಹೊರತಂದಿರುವ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಆತ್ಮಸಾಕ್ಷಿ ಹಾಗೂ ಮನಸಾಕ್ಷಿಗೆ ಅನುಗುಣವಾಗಿ ಕಂದಾಯ ಇಲಾಖೆ ನೌಕರರು ಪ್ರಾಮಾಣಿಕವಾಗಿ ಹಾಗೂ ಪರಿಶುದ್ಧವಾಗಿ ನಮಗೆ ಕೊಟ್ಟಿರುವ ಕೆಲಸವನ್ನು ಚಾಚು ತಪ್ಪದೇ ಮಾಡಬೇಕು. ಪ್ರತಿಯೊಬ್ಬರ ಮನಸ್ಸಿನಲ್ಲಿ ಸಂತೋಷ ತರುವ ರೀತಿ ಕೆಲಸ ಮಾಡಿದಾಗ ಜನಸಾಮಾನ್ಯರಿಗೆ ಕಂದಾಯ ಇಲಾಖೆ ಬಗ್ಗೆ ಅಭಿಮಾನ ಬರುತ್ತದೆ ಎಂದು ಹೇಳಿದರು.
ಜೀವನ ಎನ್ನುವುದು ಅತಿ ಅಮೂಲ್ಯವಾದದ್ದು, ಅದನ್ನು ಪರಿಣಾಮಕಾರಿಯಾಗಿ ಅರ್ಥಪೂರ್ಣವಾಗಿ ಕಳೆಯಬೇಕು. ಜೀವನದಲ್ಲಿ ಮೌಲ್ಯಗಳನ್ನು ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಹೊಸ ವರ್ಷದಲ್ಲಿ ಓರೆ ಕೋರೆಗಳನ್ನು ತಿದ್ದುಕೊಂಡು ಬದಲಾವಣೆ ಆಗುವ ರೀತಿ ಕೆಲಸ ಮಾಡಬೇಕು. ಕಂದಾಯ ಇಲಾಖೆ ಬಹಳ ವಿಶೇಷವಾದ ಇಲಾಖೆಯಾಗಿದ್ದು, ಅಂತೆಯೇ ಪ್ರಾಮುಖ್ಯತೆ ಜತೆಗೆ ಗುರುತರವಾದ ಜವಾಬ್ದಾರಿ ಇದೆ. ಬೇರೆ ಇಲಾಖೆಗೂ ಹಾಗೂ ಕಂದಾಯ ಇಲಾಖೆಗೂ ಸಾಕಷ್ಟು ವ್ಯತ್ಯಾಸ ಇರುವುದನ್ನು ನಾವು ನೋಡಬಹುದು. ಆದ್ದರಿಂದ ಕಂದಾಯ ಇಲಾಖೆ ನೌಕರರು ತಾವು ಮಾಡುವ ಕೆಲಸದಲ್ಲಿ ಪರಿಶುದ್ಧತೆ, ನಿಖರತೆ ಇರಬೇಕು ಎಂದರು.
ಜನ ಸಾಮಾನ್ಯರಿಗೆ ಅನುಕೂಲವಾಗುವ ರೀತಿ ಕಂದಾಯ ಇಲಾಖೆ ನೌಕರರು ಕೆಲಸ ಮಾಡಬೇಕು. ನೌಕರರು ಮಾಡಿದ ಕೆಲಸದಿಂದ ಕಳೆದ ಆರು ತಿಂಗಳಲ್ಲಿ ಬಾಕಿ ಇದ್ದ 4,600 ನ್ಯಾಯಾಲಯದ ಕೇಸ್‌ಗಳು ಇತ್ಯರ್ಥಗೊಂಡಿವೆ. ಪೌತಿ ಖಾತೆ ಆಂದೋಲನ ಯಶಸ್ವಿಯಾಗಿದೆ. ಪಹಣಿ ತಿದ್ದುಪಡಿ, ಸಾಮಾಜಿಕ ಭದ್ರತಾ ಯೋಜನೆ, ಫ್ರೂಟ್ಸ್ ಯೋಜನೆಗಳು ನೌಕರರೆಲ್ಲರೂ ಜತೆಗೂಡಿ ಕೆಲಸ ಮಾಡಿರುವುದರಿಂದ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿವೆ ಎಂದರು.
ಕಂದಾಯ ಇಲಾಖೆ ನೌಕರರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ಒಂದು ವರ್ಷಕ್ಕೆ 20 ಸಾವಿರ ರೂಗಳನ್ನು ತಮ್ಮ ಕುಟುಂಬದವರನ್ನು ಸೇರಿಸಿ ಹೆಲ್ತ್ ಇನ್ಸೂರೆನ್ಸ್ ಮಾಡಿಸಿದರೆ 20 ಲಕ್ಷ ರೂವರೆಗೆ ಮೆಡಿಕಲ್ ಕ್ಲೈಮ್ ಮಾಡಬಹುದು. ಅದರ ಬಗ್ಗೆ ಹೆಚ್ಚಿನ ಗಮನ ಕೊಡಿ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್, ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಿ.ತಮ್ಮಣ್ಣಗೌಡ, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಉಪಾಧ್ಯಕ್ಷರಾದ ವೆಂಕಟೇಶ್, ಜಗದೀಶ್, ಮಂಜುನಾಥ್, ಪೂರ್ಣಚಂದ್ರ ಇತರರಿದ್ದರು.