ಮನೆಗಳಲ್ಲೇ ಹೊಸ ವರ್ಷಾಚರಣೆ ; 2021ಕ್ಕೆ ವಿದಾಯ, 2022ಕ್ಕೆ ಸ್ವಾಗತ

DSC_3884
Published on

ತುಮಕೂರು : ಕರೊನಾ 3ನೇ ಆತಂಕದ ನಡುವೆಯೂ ಹೊಸ ವರ್ಷಾಚರಣೆಗೆ ನಗರದ ಬೇಕರಿಗಳಲ್ಲಿ ಕೇಕ್ ಖರೀದಿಗೆ ಜನಜಂಗುಳಿ ಸೇರಿತ್ತು. ಸಂಕಷ್ಟದ ಸಂವತ್ಸರ 2021ಕ್ಕೆ ವಿದಾಯ ಹೇಳಿ, ಹೊಸ ಭರವಸೆಯೊಂದಿಗೆ 2022 ಸ್ವಾಗತಿಸಲು ನಗರವಾಸಿಗಳು ಕರೊನಾ ಭಯದಲ್ಲಿಯೂ ಭರ್ಜರಿ ಸಿದ್ಧತೆ ನಡೆಸಿದರು. ಶುಕ್ರವಾರ ಬೆಳಗ್ಗೆಯಿಂದಲೇ ಬೇಕರಿಗಳ ಮುಂದೆ ಜನ ಸೇರಿದ್ದರು.

ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಆಚರಣೆಗೆ ನಗರದ ಬಹುತೇಕ ಬೇಕರಿಗಳಲ್ಲಿ ತರಹೇವಾರಿ ಕೇಕ್‌ಗಳು ಮಾರಾಟಕ್ಕೆ ಸಿದ್ಧಪಡಿಸಿಕೊಳ್ಳಲಾಗಿತ್ತು, ಎಲ್ಲೆಡೆಯೂ ನೂರಾರು ಕೆಜಿ ಕೇಕ್ ವಹಿವಾಟು ನಡೆಯಿತು.

ಆದರೆ, ಶುಕ್ರವಾರ ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದ ಕಾರಣದಲ್ಲಿ ಮಧ್ಯರಾತ್ರಿಯ ಸಾರ್ವಜನಿಕ ಸಂಭ್ರಮಾಚರಣೆಗೆ ಕಡಿವಾಣ ಹಾಕಲಾಗಿತ್ತು, ಬಾರ್, ಡಾಬಾ ಸೇರಿ ಎಲ್ಲಿಯೂ ಜನರು ಗುಂಪು ಸೇರಲು ಪೊಲೀಸರು ಅವಕಾಶ ಮಾಡಿಕೊಡಲಿಲ್ಲ.

ಎಲ್ಲರೂ ಮನೆಯಲ್ಲಿಯೇ ಹೊಸವರ್ಷವನ್ನು ಸ್ವಾಗತಿಸುವಂತಾಗಿತ್ತು, ಮದ್ಯಪ್ರಿಯರಿಗೆ ನಿರಾಸೆಯಾಗಿದ್ದು ಮನೆಯಲ್ಲಿ ಕುಡಿಯಲು ಸಾಧ್ಯವಾಗದೆ ಪರಿತಪಿಸಿದ್ದು ನಡೆಯಿತು. ಇನ್ನೂ ಕೆಲವೆಡೆ ಮನೆಗಳಲ್ಲಿಯೂ ತುಂಡು, ಗುಂಡು ಪಾರ್ಟಿ ಮಾಡಿ ಸಂಭ್ರಮಿಸಿದರು.

ಬಾರ್‌ಗಳಲ್ಲಿ ರಾತ್ರಿ 10ರ ವರೆಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿದ್ದ ಕಾರಣಕ್ಕೆ ಮದ್ಯಕೊಳ್ಳಲು ಜನರು ಸಂಜೆಯಿಂದಲೇ ಮುಗಿಬಿದ್ದಿದ್ದರು. ಕರೊನಾ ಆತಂಕದ ನಡುವೆಯೂ ದಾಖಲೆ ಪ್ರಮಾಣದಲ್ಲಿ ವ್ಯಾಪಾರ ನಡೆಯಿತು.

ಬೇಕರಿಗಳಲ್ಲಿ ಒಂದೇ ದಿನ ಲಕ್ಷಾಂತರ ರೂ. ವ್ಯಾಪಾರ ನಡೆಯಿತು. ಪ್ಯಾಸ್ಟ್ರಿ ಕೇಕ್, ಕೇಕ್‌ಗಳು ಖರೀದಿಗೆ ಯುವಜನತೆ ಮುಗಿಬಿದ್ದಿದ್ದರು. 300 ರೂ.,ನಿಂದ 900 ರೂ., ವರೆಗಿನ ಪ್ಯಾಸ್ಟ್ರಿ ಕೇಕ್‌ಗಳಿಗೆ ಭಾರಿ ಬೇಡಿಕೆ ಕಂಡುಬಂತು.

ಬಹುತೇಕ ದೊಡ್ಡ ದೊಡ್ಡ ಪಾರ್ಟಿಗಳು, ಹೊಸ ವರ್ಷಾಚರಣೆ ಸಂಭ್ರಮಕ್ಕೆ ಕಡಿವಾಣ ಬಿದ್ದಿತ್ತು. ಇನ್ನೂ ಮನೆಯಿಂದ ಹೊರ ಹೋಗದವರು ಕುಟುಂಬ ಸದಸ್ಯರೊಂದಿಗೆ ಕೇಕ್ ಕತ್ತರಿಸಿ ಹೊಸ ವರ್ಷವನ್ನು ಸಿಹಿಯಾಗಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net