ಉತ್ತರಾಯಣದಲ್ಲಿ ಶಿರೂರು ಮಠಕ್ಕೆ ಹೊಸ ಯತಿ

Shirur
Published on

ಉಡುಪಿ: ಶಿರೂರು ಮಠಾಧೀಶರಾಗಿದ್ದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ 2018ರಲ್ಲಿ ವೃಂದಾವನಸ್ಥರಾದ ಬಳಿಕ ದ್ವಂದ್ವ ಮಠಾಧಿಪತಿಗಳ ನೆಲೆಯಲ್ಲಿ ಮಠದ ಆಡಳಿತ ಉಸ್ತುವಾರಿ ವಹಿಸಿದ್ದು, ಅನೇಕ ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸಲಾಗುತ್ತಿದೆ. ಉತ್ತರಾಯಣದಲ್ಲಿ ಮಠಕ್ಕೆ ಉತ್ತರಾಧಿಕಾರಿ ನೇಮಿಸಲಾಗುವುದು ಎಂದು ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಾಪ್ತ ವಯಸ್ಸಿನ ವಟುವನ್ನು ಆಯ್ಕೆ ಮಾಡಿದ್ದು, ಗುರುಕುಲದಲ್ಲಿ ಧಾರ್ವಿುಕ ಶಿಕ್ಷಣ ನೀಡಲಾಗುತ್ತಿದೆ. ಹಿರಿಯ ಅಷ್ಟ ಮಠಾಧೀಶರ ವಿಶೇಷ ಸಹಕಾರದೊಂದಿಗೆ ಉತ್ತರಾಯಣ ಪರ್ವ ಕಾಲದಲ್ಲಿ ಸಂನ್ಯಾಸ ದೀಕ್ಷೆ ಕೊಡಲಾಗುವುದು ಎಂದು ಶ್ರೀಗಳು ತಿಳಿಸಿದರು. ಶಿರೂರು ಮೂಲ ಮಠ ಮತ್ತು ಉಡುಪಿ ಮಠದಲ್ಲಿ ಕೆಲವು ಜೀಣೋದ್ಧಾರ ಕಾರ್ಯ ಮಾಡಲಾಗಿದೆ. ಎಲ್ಲ ಕಾಮಗಾರಿ ಹಾಗೂ ಶಿರೂರು ಮಠದ ದೈನಂದಿನ ಖರ್ಚು ಹಾಗೂ ಶಿರೂರು ಗೋಶಾಲೆಯ ನಿರ್ವಹಣೆಗೆ ಮಣಿಪಾಲದಲ್ಲಿರುವ ಕಟ್ಟಡದಿಂದ ಬರುವ ಬಾಡಿಗೆ ಹಾಗೂ ರಥಬೀದಿಯ ಶಿರೂರು ಮಠದ ಕಟ್ಟಡಗಳಿಂದ ಬರುವ ಬಾಡಿಗೆ ಬಳಸಲಾಗಿದೆ. ಮಠದ ಸೊತ್ತುಗಳನ್ನು ವಿಕ್ರಯಿಸಿಲ್ಲ, ಪರಭಾರೆ ಮಾಡಿಲ್ಲ ಎಂದು ಶ್ರೀಗಳು ಹೇಳಿದರು. ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ಕನಕ ಮಾಲ್ ಸಮಸ್ಯೆಗೆ ಮುಕ್ತಿ

ಸೋದೆ ಮಠ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರತ್ನಕುಮಾರ್ ಮಾತನಾಡಿ, ನನೆಗುದಿಗೆ ಬಿದ್ದಿದ್ದ ಕನಕ ಮಾಲ್ ನಿರ್ವಣದ ತೊಡಕನ್ನು ಸಂಧಾನದ ಮೂಲಕ ಮಠದ ಹಿತಾಸಕ್ತಿಗೆ ಅನುಗುಣವಾಗಿ ನ್ಯಾಯಾಂಗ ಪ್ರಕ್ರಿಯೆ ಮೂಲಕ ಬಗೆಹರಿಸಲಾಗುತ್ತಿದೆ. ಮಠದ ಭಕ್ತರಾಗಿರುವ ಮುಂಬೈನ ಹಿರಿಯ ಉದ್ಯಮಿಯೊಬ್ಬರು ಜಂಟಿ ಅಭಿವೃದ್ಧಿ ಮಾದರಿ ಆಧಾರದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಿದ್ದಾರೆ. ಉದ್ದೇಶಿತ ನೆಲಮಹಡಿ ಮತ್ತು 8 ಮಹಡಿಗಳ ಪೈಕಿ ಮೇಲಿನ 4 ಮಹಡಿಗಳನ್ನು ಸುಸಜ್ಜಿತ ರೀತಿಯಲ್ಲಿ ಸಂಪೂರ್ಣಗೊಳಿಸಿ ಶಿರೂರು ಮಠಕ್ಕೆ ಹಸ್ತಾಂತರಿಸಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net