ಜಿಲ್ಲೆಯಲ್ಲಿ 37,529 ಹೊಸ ಮತದಾರರು: ನಾಗಮಂಗಲ ಹೆಚ್ಚು, ಮಂಡ್ಯ ಕಡಿಮೆ

Election)
Published on

ಮಂಡ್ಯ: ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಲು ಜಿಲ್ಲೆಯಲ್ಲಿ 37,529 ಹೊಸ ಮತದಾರರು ಉತ್ಸುಕರಾಗಿದ್ದಾರೆ.

2023ರ ಏಪ್ರಿಲ್ 1ಕ್ಕೆ 18 ವರ್ಷ ತುಂಬುವ ಯುವಜನರನ್ನು ಮತದಾರರ ಪಟ್ಟಿಗೆ ಸೇರಿಸಲು ಈ ಬಾರಿ ಜನವರಿ ತಿಂಗಳಲ್ಲೇ ಅವಕಾಶ ಕಲ್ಪಿಸಲಾಗಿತ್ತು. ಆದ್ದರಿಂದ ಪ್ರಸಕ್ತ ಚುನಾವಣೆಯಲ್ಲಿ ಹೊಸ ಮತದಾರರ ಸೇರ್ಪಡೆ ಪ್ರಕ್ರಿಯೆ ಈ ಹಿಂದಿಗಿಂತಲೂ ಹೆಚ್ಚಾಗಿದೆ. ಒಂದು ಹಂತದಲ್ಲಿ ಹೊಸ ಮತದಾರರೇ ಕೆಲವು ಜಿದ್ದಾಜಿದ್ದಿನ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಯುವಜನರ ಚಿಂತನೆಯ ಸ್ವರೂಪವೇ ಬೇರೆ. ಈ ಹಿನ್ನೆಲೆಯಲ್ಲಿ ಫಲಿತಾಂಶದಲ್ಲಿ ಬದಲಾವಣೆಗೆ ಕಾರಣರಾಗಬಹುದು.

ಮತದಾನದ ಪ್ರಮಾಣ ಹೆಚ್ಚಿಸಲು, ಅದರಲ್ಲೂ ಯುವ ಮತದಾರರನ್ನು ಮತದಾನದತ್ತ ಸೆಳೆಯಲು ಜಿಲ್ಲಾ ಸ್ವೀಪ್ ಸಮಿತಿ ಈವರೆಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ. ಕಾಲೇಜುಗಳು, ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಅರಿವು ಮೂಡಿಸಲಾಗಿದೆ. ಯುವ ಮತದಾರರನ್ನು ಗುರಿಯಾಗಿಟ್ಟುಕೊಂಡು ಸೈಕಲ್ ಜಾಥಾ, ಜಾಗೃತಿ ಜಾಥಾಗಳನ್ನು ನಡೆಸಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ ಮತದಾನವಾದ ಬೂತ್‌ಗಳಲ್ಲೂ ಸ್ವೀಪ್ ಕಾರ‌್ಯಕ್ರಮಗಳನ್ನು ನಡೆಸಲಾಗಿದೆ.

ನಾಗಮಂಗಲ ಕ್ಷೇತ್ರದಲ್ಲಿ ಅತಿ ಹೆಚ್ಚು(5961) ಹೊಸ ಮತದಾರರಿದ್ದಾರೆ. ಮದ್ದೂರಿನಲ್ಲಿ 5582, ಮೇಲುಕೋಟೆಯಲ್ಲಿ 5564, ಕೆ.ಆರ್.ಪೇಟೆಯಲ್ಲಿ 5302, ಶ್ರೀರಂಗಪಟ್ಟಣದಲ್ಲಿ 5191, ಮಳವಳ್ಳಿಯಲ್ಲಿ 5016, ಮಂಡ್ಯ ಕ್ಷೇತ್ರದಲ್ಲಿ 4913 ಹೊಸ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಮತಗಟ್ಟೆಗಳನ್ನು ಯುವ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಅಂತಹ ಮತಗಟ್ಟೆಗಳ ಎಲ್ಲ ಸಿಬ್ಬಂದಿ, ಅಧಿಕಾರಿಗಳು ಯುವಜನರೇ ಆಗಿರುವುದು ವಿಶೇಷ.

ಮಳವಳ್ಳಿ ಕ್ಷೇತ್ರದಲ್ಲಿ ಪಟ್ಟಣದ ಸರ್ಕಾರಿ ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮತಗಟ್ಟೆ, ಮದ್ದೂರು ಕ್ಷೇತ್ರದಲ್ಲಿ ಸೋಮನಹಳ್ಳಿ-1, ಉಪ್ಪಿನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೇಲುಕೋಟೆ ಕ್ಷೇತ್ರದಲ್ಲಿ ಲಕ್ಷ್ಮೀಸಾಗರ-1, ಡಾಮಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಡ್ಯ ಕ್ಷೇತ್ರದಲ್ಲಿ ನಗರದ ಲಕ್ಷ್ಮೀಜನಾದರ್ನ ಶಾಲೆ, ಆದರ್ಶ ವಿದ್ಯಾಸಂಸ್ಥೆ, ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ತಾಪಂ ಕಚೇರಿ ಮತಗಟ್ಟೆ, ಹೊಸ ಆನಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಾಗಮಂಗಲ ಕ್ಷೇತ್ರದಲ್ಲಿ ಚಿಕ್ಕಜಟಕ, ಅಂಚೆಚಿಟ್ಟನಹಳ್ಳಿ, ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಸಾದಗೋನಹಹಳ್ಳಿ ಕಿರಿಯ ಪ್ರಾಥಮಿಕ ಶಾಲೆ, ಬೊಮ್ಮೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುವ ಮತಗಟ್ಟೆ ತೆರೆಯಲಾಗಿದೆ.

ಮೂರನೇ ವಿ.ವಿ ಪ್ಯಾಟ್ ಬಳಕೆ: 2018ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ, ವಿದ್ಯುನ್ಮಾನ ಮತಯಂತ್ರದ ಜತೆಗೆ ಮತದಾನ ಖಾತ್ರಿಪಡಿಸುವ ವಿ.ವಿ ಪ್ಯಾಟ್(ವೋಟರ್ ವೆರಿಫೈಯಬಲ್ ಪೇಪರ್ ಆಡಿಯಟ್ ಟ್ರಯಲ್) ಯಂತ್ರ ಬಳಸಲಾಗಿತ್ತು. ಬಳಿಕ ಲೋಕಸಭೆ ಹಾಗೂ ಇದೀಗ 3ನೇ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಬಳಕೆಯಾಗುತ್ತಿದೆ.

ಜಿಲ್ಲಾಡಳಿತ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾರರ ಸಹಭಾಗಿತ್ವ ಸಮಿತಿ(ಸ್ವೀಪ್) ಮೂಲಕ ವಿದ್ಯುನ್ಮಾನ ಮತಯಂತ್ರ(ಇವಿಎಂ) ಹಾಗೂ ವಿ.ವಿ ಪ್ಯಾಟ್ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ಅರಿವು ಮೂಡಿಸುವ ಪ್ರಯತ್ನ ನಡೆದಿದೆ. ವಿ.ವಿ ಪ್ಯಾಟ್ ಯಂತ್ರ ಮತದಾನ ಕಾರ್ಯವಿಧಾನ, ಮತದಾನದ ಬಗ್ಗೆ ಸೆಕ್ಟರ್ ಅಧಿಕಾರಿಗಳು, ಪಿಆರ್‌ಒ, ಎಪಿಆರ್‌ಒ, ಪಿಒ ಅಧಿಕಾರಿಗಳಿಗೆ ತರಬೇತಿ ಹಂತದಲ್ಲೇ ವಿ.ವಿ ಪ್ಯಾಟ್ ಕಾರ್ಯವಿಧಾನದ ಬಗ್ಗೆ ತರಬೇತಿ ನೀಡಲಾಗಿದೆ.

ಈ ಹಿಂದಿನ ಚುನಾವಣೆಗಳಲ್ಲಿ ಕೇವಲ ಇವಿಎಂ ಯಂತ್ರ ಮತ್ತು ಬ್ಯಾಲೆಟ್ ಯೂನಿಟ್ ಮಾತ್ರ ಬಳಸಲಾಗುತ್ತಿತ್ತು. ಇವಿಎಂ ಯಂತ್ರದಲ್ಲಿ ಬ್ಯಾಲೆಟ್ ಬಟನ್ ಒತ್ತಿದಾಗ ಬ್ಯಾಲೆಟ್ ಯಂತ್ರದಲ್ಲಿ ಕೆಂಪು ದೀಪ ಬೆಳಗಿ, ಕಂಟ್ರೋಲ್ ಯುನಿಟ್‌ನಲ್ಲಿ ಬೀಪ್ ಶಬ್ದ ಬರುತ್ತಿತ್ತು. 2018ರಿಂದ ಹೆಚ್ಚುವರಿಯಾಗಿ ವಿವಿ ಪ್ಯಾಟ್ ಮತ್ತು ವಿಎಸ್‌ಡಿಯು (ವಿವಿ ಪ್ಯಾಟ್ ಸ್ಟೇಟಸ್ ಡಿಸ್ಪ್ಲೇ ಯೂನಿಟ್) ಬಳಸಲಾಗುತ್ತಿದೆ. ಯಂತ್ರ ಅಳವಡಿಕೆಯಿಂದಾಗಿ ಮತದಾರರು ಇವಿಎಂ ಯಂತ್ರದಲ್ಲಿ ಬ್ಯಾಲೆಟ್ ಬಟನ್ ಒತ್ತಿದಾಗ ವಿ.ವಿ ಪ್ಯಾಟ್ ಯಂತ್ರದಲ್ಲಿ ಕಾಣಿಸಿಕೊಳ್ಳುವ ಮುದ್ರಿತ ಚೀಟಿಯೊಂದು ನಿಮ್ಮ ಮತವನ್ನು ಖಾತ್ರಿಪಡಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net