ಪಿ.ಜಿ.ಪಾಳ್ಯ ಸಫಾರಿ ಕೇಂದ್ರಕ್ಕೆ ಹೊಸ ವಾಹನ

10 HANUR 3
ಪಿ.ಜಿ ಪಾಳ್ಯ ವನ್ಯಜೀವಿ ವಲಯದ ಸಫಾರಿಗೆ ನೀಡಲಾಗಿರುವ ಹೊಸ ವಾಹನ.
Published on

ಹನೂರು: ಮಲೆಮಹದೇಶ್ವರ ವನ್ಯಜೀವಿ ವಿಭಾಗದ ವತಿಯಿಂದ ತಾಲೂಕಿನ ಲೊಕ್ಕನಹಳ್ಳಿಯಲ್ಲಿ ತೆರೆಯಲಾಗಿರುವ ಪಿ.ಜಿ ಪಾಳ್ಯ ವನ್ಯಜೀವಿ ವಲಯದ ಸಫಾರಿ ಕೇಂದ್ರಕ್ಕೆ ಹೊಸದಾಗಿ ಮತ್ತೊಂದು ವಾಹನವನ್ನು ಖರೀದಿಸಲಾಗಿದ್ದು, ಪ್ರವಾಸಿಗರ ಸೇವೆಗೆ ನೀಡಲಾಗಿದೆ.

ಪಿ.ಜಿ ಪಾಳ್ಯ ವನ್ಯಜೀವಿ ವಲಯದಲ್ಲಿ ಆನೆ, ಕಾಡೆಮ್ಮೆ, ಹುಲಿ, ಜಿಂಕೆ ಮುಂಗುಸಿ, ನರಿ ಸೇರಿದಂತೆ ಇನ್ನಿತರ ಕಾಡು ಪ್ರಾಣಿಗಳು ಹಾಗೂ ವಿವಿಧ ಪಕ್ಷಿಗಳ ಆವಾಸ ಸ್ಥಾನವಾಗಿದೆ. ಜತೆಗೆ ಅರಣ್ಯ ಪ್ರದೇಶವು ಸಮೃದ್ಧಿಯಿಂದ ಕೂಡಿದೆ. ಆದರೆ ಪ್ರವಾಸಿಗರಿಗೆ ಅರಣ್ಯದ ಸೊಬಗು ಹಾಗೂ ವನ್ಯಜೀವಿಗಳನ್ನು ವೀಕ್ಷಿಸಲು ಅವಕಾಶ ಇರಲಿಲ್ಲ. ಈ ದಿಸೆಯಲ್ಲಿ ಪ್ರವಾಸಿಗರಿಗೆ ಹಾಗೂ ವನ್ಯಜೀವಿ ಪ್ರಿಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಳೆದ ಡಿಸೆಂಬರ್‌ನಲ್ಲಿ ಲೊಕ್ಕನಹಳ್ಳಿಯಲ್ಲಿ ಸಫಾರಿ ಕೇಂದ್ರ ತೆರೆದು 2 ವಾಹನಗಳನ್ನು ಒದಗಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲಾಗಿತ್ತು. ಅರಣ್ಯ ಪ್ರದೇಶದಲ್ಲಿ ಸಿಗುವ ವನ್ಯಪ್ರಾಣಿಗಳ ದರ್ಶನದಿಂದ ಪ್ರವಾಸಿಗರು ಆಕರ್ಷಿತರಾಗಿದ್ದರು. ಇದರಿಂದ ವಾರಾಂತ್ಯದ ದಿನಗಳಲ್ಲಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ ವಾಹನದ ಕೊರತೆಯಿಂದ ನಿರಾಸೆಯಿಂದ ಹಿಂತಿರುಗುತ್ತಿದ್ದರು. ಇದನ್ನು ಮನಗಂಡ ಅರಣ್ಯಾಧಿಕಾರಿಗಳು ಇದೀಗ ಹೊಸದಾಗಿ ಮತ್ತೊಂದು ವಾಹನವನ್ನು ಖರೀದಿಸಿ ಸಫಾರಿ ಸೇವೆ ನೀಡಿದ್ದಾರೆ. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದ್ದು, ಅರಣ್ಯ ಇಲಾಖೆಗೆ ಇನ್ನಷ್ಟು ಆದಾಯ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net