ಮೈಸೂರಿಗೆ ಬಂತು ಹೊಸ ‘ಟ್ರಿನ್ ಟ್ರಿನ್’ ಸೈಕಲ್

mybyk 2
Published on


ಸದೇಶ್ ಕಾರ್ಮಾಡ್ ಮೈಸೂರು
ದೇಶದಲ್ಲಿ ಪ್ರಥಮ ಬಾರಿಗೆ 6 ವರ್ಷಗಳ ಹಿಂದೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ‘ಟ್ರಿಣ್ ಟ್ರಿಣ್ ಪಬ್ಲಿಕ್ ಬೈಸಿಕಲ್ ಷೇರಿಂಗ್’ ಯೋ ಜನೆ ಪ್ರಾರಂಭಗೊಂಡಿತ್ತು. ಯೋಜನೆಗೆ ದೊರೆತ ಅಭೂತಪೂರ್ವ ಸ್ಪಂದನೆ ಹಿನ್ನೆಲೆಯಲ್ಲಿ ನಗರ ಪಾಲಿಕೆಯು ಇದೀಗ ಹಳೆಯ ಸೈಕಲ್ ಗಳನ್ನು ಬದಲಾಯಿಸಿ ಹೊಸ ಸೈಕಲ್‌ಗಳನ್ನು ಸಾರ್ವಜನಿಕರ ಸೇವೆಗೆ ಒದಗಿಸಲು ಸಿದ್ಧತೆ ಕೈಗೊಂಡಿದೆ.

ಬೈಸಿಕಲ್ ಬಳಕೆಯನ್ನು ಜನಪ್ರಿಯಗೊಳಿಸುವ ಸಲುವಾಗಿ ನಗರ ಪಾಲಿಕೆಯು ನಗರದಲ್ಲಿ ‘ಟ್ರಿಣ್ ಟ್ರಿಣ್ ಪಬ್ಲಿಕ್ ಬೈಸಿಕಲ್ ಷೇರಿಂಗ್’ ಯೋಜನೆ ಪ್ರಾರಂಭಿಸಿತು. 4 ಜೂನ್ 2017 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದ ಶ್ರೀ ಜಯಚಾಮರಾ ಜೇಂದ್ರ ಒಡೆಯರ್ ವೃತ್ತದಲ್ಲಿ ಬೈಸಿಕಲ್ ಸೇವೆಗೆ ಚಾಲನೆ ನೀಡಿದ್ದರು. ಈ ಸೈಕಲ್‌ಗಳನ್ನು ಉದ್ಯೋಗಸ್ಥರು, ವಿದ್ಯಾರ್ಥಿಗಳು ಸೇರಿದಂತೆ ಹಲವರು ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದಾರೆ.

ಹೊಸ ಸೈಕಲ್‌ಗಳನ್ನು ಸಾರ್ವಜನಿಕರ ಸೇವೆಗೆ ಒದಗಿಸುವ ಸಲುವಾಗಿ ಮಾ.21 ರಂದು ಹಳೆಯ ಟ್ರಿಣ್ ಟ್ರಿಣ್ ಸೈಕಲ್‌ಗಳ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಡಾಕಿಂಗ್ ಸೆಂಟರ್‌ನಲ್ಲಿದ್ದ ಹಳೆಯ ಸೈಕಲ್‌ಗಳನ್ನು ಬದಲಾಯಿಸಿದ ನಂತರ ಹೊಸ ಸೈಕಲ್‌ಗಳ ಅಳವಡಿಕೆ ಕಾರ್ಯ ಕೈಗೊಳ್ಳಲಾಯಿತು. ಇದೀಗ ನಗರದ ಬಹುತೇಕ ಕಡೆಗಳಲ್ಲಿ ಸೈಕಲ್ ಅಳವಡಿಕೆ ಪೂರ್ಣಗೊಂಡಿದ್ದು, ಮುಂದಿನ ವಾರ ಜನರ ಸೇವೆಗೆ ಒದಗಿಸಲು ಪಾಲಿಕೆ ಸಿದ್ಧತೆ ಕೈಗೊಂಡಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯೊಜನೆಗೆ ನಗರದಲ್ಲಿ ಚಾಲನೆ ದೊರೆಯಿತು. ಇದೀಗ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲಿಯೇ ನೂತನ ಸೈಕಲ್‌ಗಳನ್ನು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲು ಸಿದ್ಧತೆ ಕೈಗೊಂಡಿರುವುದು ವಿಶೇಷವಾಗಿದೆ.

ಪ್ರಸ್ತುತ ನಗರದಲ್ಲಿ 450 ಬೈಸಿಕಲ್ ಹಾಗೂ 48 ನಿಲ್ದಾಣಗಳು ಇವೆ. ಇದನ್ನು 1000 ಬೈಸಿಕಲ್, 100 ನಿಲ್ದಾಣಕ್ಕೆ ವಿಸ್ತರಿಸಲಾಗುತ್ತಿದೆ. ಹಳೆಯ ಸೈಕಲ್‌ಗಳು ಹಳದಿ ಬಣ್ಣದಿಂದ ಕೂಡಿತ್ತು. ನೂತನ ಸೈಕಲ್‌ಗಳು ಹಸಿರು ಬಣ್ಣದಿಂದ ಕಂಗೊಳಿಸುತ್ತಿವೆ. ಹೊಸ ಸೈಕಲ್‌ಗಳು ಸ್ವಯಂ ಚಾಲಿತ ಸ್ಮಾರ್ಟ್ ಲಾಕ್ ವ್ಯವಸ್ಥೆ ಹೊಂದಿದೆ. ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ‘ಮೈ ಬೈಕ್’ (ಋ್ಗಿಆ್ಗಓ) ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸೈಕಲ್‌ಅನ್ನು ಬಳಸಬಹುದು. ಮೈ ಬೈಕ್ ಆ್ಯಪ್‌ನಲ್ಲಿ ಸೈಕಲ್‌ನ ಡಾಕಿಂಗ್ ಸೆಂಟರ್ ಎಲ್ಲೆಲ್ಲಿ ಇವೆ? ಎಷ್ಟು ದೂರದಲ್ಲಿ ಇವೆ ಎಂಬ ಮಾಹಿತಿ ಲಭ್ಯವಿದೆ. ಈಗಾಗಲೇ ‘ಟ್ರಿಣ್ ಟ್ರಿಣ್ ಪಬ್ಲಿಕ್ ಬೈಸಿಕಲ್ ಷೇರಿಂಗ್’ ಯೋಜನೆಯಡಿ ಶುಲ್ಕ ನೀಡಿ ಹೆಸರು ನೋಂದಾಯಿಸಿದವರು ಮತ್ತೆ ನೋಂದಾಯಿಸುವ ಅವಶ್ಯಕತೆ ಇಲ್ಲ. ಸೈಕಲ್ ಬಳಕೆಯ ಕುರಿತು ಸದ್ಯದಲ್ಲಿಯೇ ನಗರ ಪಾಲಿಕೆ ಮತ್ತಷ್ಟು ಮಾಹಿತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲಿದೆ.

ಹೊಸ ಸೈಕಲ್ ಟ್ರಾೃಕ್ ನಿರ್ಮಾಣ

ಒಂದೆಡೆ ಹೊಸ ಸೈಕಲ್‌ಗಳನ್ನು ನೀಡಲು ಮುಂದಾಗಿರುವ ನಗರ ಪಾಲಿಕೆಯು ಮತ್ತೊಂದೆಡೆ ಬೈಸಿಕಲ್ ಬಳಕೆದಾರರಿಗೆ ಹೊಸ ಸೈಕಲ್ ಟ್ರಾೃಕ್ ನಿರ್ಮಾಣಕ್ಕೂ ಯೋಜನೆ ರೂಪಿಸಿದೆ. ನಗರದ ಲಲಿತ ಮಹಲ್ ರಸ್ತೆಯ ಒಂದು ಭಾಗದಲ್ಲಿ ದಶದಕ ಹಿಂದೆಯೇ ಸೈಕಲ್ ಟ್ರಾೃಕ್ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ನಗರದ ವಿವಿಧ ಪ್ರಮುಖ ರಸ್ತೆಗಳಲ್ಲೂ ಸೈಕಲ್ ಟ್ರಾೃಕ್ ನಿರ್ಮಾಣ ಮಾಡಲು ಪಾಲಿಕೆ ಉದ್ದೇಶಿಸಿದೆ. ಒಟ್ಟು 3.3 ಕೋಟಿ ರೂ. ವೆಚ್ಚದಲ್ಲಿ 8.72 ಕಿ.ಮೀ. ಉದ್ದದ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡಲಾಗುವುದು. ಜೆಎಲ್‌ಬಿ ರಸ್ತೆ, ಸೀತಾವಿಲಾಸ ರಸ್ತೆ, ಬೋಗಾದಿ ರಸ್ತೆ, ವಿಶ್ವಮಾನವ ರಸ್ತೆ, ಕೃಷ್ಣರಾಜ ಬುಲೇವಾರ್ಡ್ ರಸ್ತೆ, ಚಾಮರಾಜ ಜೋಡಿ ರಸ್ತೆ, ನ್ಯೂ ಕಾಂತರಾಜೇ ಅರಸ್ ರಸ್ತೆಯಲ್ಲಿ ನೂತನ ಸೈಕಲ್ ಟ್ರಾೃಕ್ ನಿರ್ಮಾಣಗೊಳ್ಳಲಿದೆ.

ಹೆಚ್ಚಿದ ಸೈಕಲ್ ಬಳಕೆ

ಕೋವಿಡ್ ನಂತರ ನಗರದ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗಿದ್ದು, ವಾಯುವಿಹಾರಕ್ಕೆ ತೆರಳುವವರು ಹಾಗೂ ಸೈಕಲ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ನಗರದಲ್ಲಿ ಪಬ್ಲಿಕ್ ಬೈಸಿಕಲ್ ಷೇರಿಂಗ್ ವ್ಯವಸ್ಥೆಯಲ್ಲಿರುವ ‘ಟ್ರಿಣ್ ಟ್ರಿಣ್’ ಸೈಕಲ್‌ಗಳ ಬಳಕೆ ಪ್ರಮಾಣ ಕೂಡ ಹೆಚ್ಚಾಗಿದೆ. 2017ರ ಜೂನ್ 4 ರಂದು ಪ್ರಾರಂಭಗೊಂಡ ‘ಟ್ರಿಣ್ ಟ್ರಿಣ್ ಪಬ್ಲಿಕ್ ಬೈಸಿಕಲ್ ಷೇರಿಂಗ್’ ಯೋಜನೆಯಡಿ 15 ಸಾವಿರಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದು, ಪ್ರತಿನಿತ್ಯ 1,200 ರಿಂದ 1,800 ಜನರು ಬಳಕೆ ಮಾಡುತ್ತಿದ್ದರು. ಹೊಸ ಸೈಕಲ್ ಬಂದ ನಂತರ ಬಳಕೆದಾರರ ಪ್ರಮಾಣ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ.


‘ಟ್ರಿಣ್ ಟ್ರಿಣ್ ಪಬ್ಲಿಕ್ ಬೈಸಿ ಕಲ್ ಷೇರಿಂಗ್’ ಯೋಜನೆಯಡಿ ಡಾಕಿಂಗ್ ಸೆಂಟರ್‌ಗಳಲ್ಲಿ ಸೈಕಲ್ ಅಳವಡಿಕೆ ಪೂರ್ಣಗೊಂಡಿದೆ. ಮುಂದಿನ ವಾರ ನೂತನ ಸೈಕಲ್‌ಗಳನ್ನು ಸಾರ್ವಜನಿಕರ ಬಳಕೆಗೆ ನೀಡಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ನೂತನ ಸರ್ಕಾರ ರಚನೆಯಾಗಿದ್ದು, ಸಚಿವರು ಹಾಗೂ ಸರ್ಕಾರದಿಂದ ಸೂಕ್ತ ನಿರ್ದೇಶನ ಪಡೆದು ಬೈಸಿಕಲ್ ಸೇವೆಯನ್ನು ಉದ್ಘಾಟಿಸಲಾಗುವುದು. ಈಗಾಗಲೇ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡವರು ಹೊಸ ಸೈಕಲ್‌ಗಳಿಗೆ ಪ್ರತ್ಯೇಕವಾಗಿ ಶುಲ್ಕ ನೀಡಿ ಹೆಸರು ನೋಂದಾಯಿಸುವ ಅವಶ್ಯಕತೆ ಇಲ್ಲ.

ಲಕ್ಷ್ಮೀಕಾಂತ್ ರೆಡ್ಡಿ, ಆಯುಕ್ತ, ನಗರ ಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net