

ತುಮಕೂರು: ಜಿಲ್ಲೆಯ ದೇವರಾಯನದುರ್ಗ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹೊಸ ಪ್ರಬೇಧದ ಸಸ್ಯ ಕಂಡುಬಂದಿದೆ.
ಬೆಟ್ಟಗಳ ಇಳಿಜಾರಿನ ಒಣ ನೆಲದಲ್ಲಿ ಬೆಳೆಯುವ ಈ ಸಸ್ಯಕ್ಕೆ ತುಮಕೂರು ಜಿಲ್ಲೆಯ ಸ್ಮರಣಾರ್ಥ ಬ್ರಾಕಿಸ್ಟೆಲ್ಮಾ ತುಮಕೂರೆನ್ಸ್ ಎಂದು ನಾಮಕರಣ ಮಾಡಲಾಗಿದೆ.
ದೇವರಾಯನದುರ್ಗ ಎಲೆ ಉದುರುವ ಕಾಡಿನಲ್ಲಿ ಅಪರೂಪದ ಸಸ್ಯಗಳನ್ನು 2017ರ ಜೂ.30ರಂದು ಕ್ಷೇತ್ರ ಅಧ್ಯಯನದ ಸಂದರ್ಭದಲ್ಲಿ ಪತ್ತೆ ಹಚ್ಚಲಾಗಿದ್ದು, ಬಾದೆಹುಲ್ಲಿನ ಸಿಂಬೋಪೊಗಾನ್ ಮಧ್ಯೆ ಬೆಳೆಯುವ ಹುಲ್ಲಿನಂತಹ ಸಣ್ಣ ಸಸ್ಯ ಇದಾಗಿದೆ. ಸುಮಾರು 1 ಮೀಟರ್ ಉದ್ದ ಬೆಳೆಯುತ್ತದೆ. ಕಾಂಡವು ದುಂಡಾಗಿದ್ದು ದುರ್ಬಲವಾಗಿರುತ್ತದೆ, ನೇರ ಬೆಳೆಯುತ್ತದೆ. ಜೂನ್-ಜುಲೈ ತಿಂಗಳ ಮುಂಗಾರಿನ ಮಳೆ ಬಿದ್ದಾಗ ಚಿಗುರೊಡೆದು ಹೂ ಬಿಡುವ ವಿಶೇಷ ಪ್ರಬೇಧದ ಸಸ್ಯ ಇದಾಗಿದೆ.
ಭಾರತದಲ್ಲಿ ಸಿಗುವ 33 ಬ್ರಾಕಿಸ್ಟೆಲ್ಮಾ ಪ್ರಭೇದಗಳ ಪೈಕಿ ಕರ್ನಾಟಕದಲ್ಲಿ 7 ಪ್ರಬೇಧಗಳ ವಿಸ್ತರಣೆ ಹಾಗೂ ಅವುಗಳಲ್ಲಿರುವ ಲಕ್ಷಣಗಳನ್ನು ಸಸ್ಯಶಾಸ್ತ್ರಜ್ಞರಾದ ಎ.ಎನ್.ಶೃಂಗೇಶ್, ಸಹನಾ ಶೃಂಗೇಶ್ ಹಾಗೂ ಪಿ.ವೇಣು ಪತ್ತೆಹಚ್ಚಿ ಪ್ರಬಂಧವನ್ನು ರಚಿಸಿ ಬಟಾನಿಕಲ್ ಸರ್ವೇ ಆಫ್ ಇಂಡಿಯಾದ ಡಾ.ಎಂ.ಸಂಜಪ್ಪ ಅವರ ಮಾರ್ಗದಲ್ಲಿ ಸಲ್ಲಿಸಿದ್ದರು. ಇಡೀ ಭಾರತದಲ್ಲೇ ಹೊಸ ಪ್ರಬೇಧ ಎಂಬುದನ್ನು ಈ ಜೂ.30ರಂದು ಘೋಷಿಸಲಾಗಿದೆ.
ಜುಲೈನಲ್ಲಿ ಚಿಗುರೊಡೆಯುವ ಸಸ್ಯ ; ಎಲೆಗಳು ಮೊನಚಾಗಿದ್ದು ಜೋತಾಡುತ್ತವೆ. ಬೇರುಗಡ್ಡೆಯ ರೂಪದಲ್ಲಿ ಭೂಮಿಯೊಳಗಿದ್ದು, ಜೂನ್-ಜುಲೈ ತಿಂಗಳ ಮುಂಗಾರಿನ ಮಳೆ ಬಿದ್ದಾಗ ಚಿಗುರೊಡೆಯುವ ಬ್ರಾಕಿಸ್ಟೆಲ್ಮಾ ತುಮಕೂರೆನ್ಸ್ ಹೂ ಬಿಡುತ್ತದೆ. ಹೂ ಮತ್ತು ಎಲೆಗಳ ಭಾರಕ್ಕೆ ಕಾಂಡ ಬಾಗುತ್ತದೆ. ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಕಾಯಿ ಬಿಡುತ್ತದೆ. ಅದರ ಕಾಯಿಗಳು ಎತ್ತಿನ ಕೊಂಬಿನ ರೂಪದಲ್ಲಿರುತ್ತವೆ. ಸಸ್ಯ ಶಾಸ್ತ್ರಜ್ಞ ಡಾ.ವಿ.ಭಾಸ್ಕರ್ ಇದರ ಅಧ್ಯಯನ ಮಾಡಿ ಬಟಾನಿಕಲ್ ಸರ್ವೇ ಆಫ್ ಇಂಡಿಯಾ ಸಂಸ್ಥೆಗೆ ಲೇಖನ ಕಳುಹಿಸಿದ್ದರು. ಅಂಡಾಶಯದ ರಚನೆ ಮರು ಅಧ್ಯಯನಕ್ಕೆ ಸಂಶೋಧನಾ ಪ್ರಬಂಧವನ್ನು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆ ವಾಪಸ್ ಕಳುಹಿಸಿತ್ತು. ಅಷ್ಟರಲ್ಲಿ ಡಾ.ವಿ.ಭಾಸ್ಕರ್ ಕಾರಣಾಂತರದಿಂದ ಅಸುನೀಗಿದ್ದರು. ನಂತರ ಅವರ ಸ್ನೇಹಿತರಾದ ಜಿಕೆವಿಕೆಯಲ್ಲಿ ಸಸ್ಯ ಶಾಸ್ತ್ರಜ್ಞರಾಗಿರುವ ಎ.ಎನ್.ಶೃಂಗೇಶ್ ಅಧ್ಯಯನ ಮುಂದುವರಿಸಿ ಪ್ರಬಂಧ ಮಂಡಿಸಿದರು.
ಇದರ ಎಲೆ, ಕಾಂಡ ತಿನ್ನುವ ಮೊಲ, ಬೇರನ್ನು ತಿನ್ನುವ ಮುಂಗುಸಿ, ಇಲಿ, ಹಂದಿಗಳು, ಹೂ ಬಿಟ್ಟಾಗ ಬರುವ ಚಿಟ್ಟೆಗಳು, ಜೇಡ, ಇರುವೆಗಳ ನಡುವೆ ಅವಿನಾಭಾವ ಸಂಬಂಧವಿದೆ. ಆಹಾರ ಜಾಲದಲ್ಲಿ ಇದರದೇ ಆದ ಪಾತ್ರವಿದೆ. ಇಂತಹ ಅಪರೂಪದ ಸಸ್ಯ ಜಿಲ್ಲೆಯಲ್ಲಿ ಸಾವಿರಾರು ವರ್ಷಗಳಿಂದ ಬದುಕುಳಿದಿದೆ. ಇವುಗಳ ಸಂರಕ್ಷಣೆಯಾಗಬೇಕಾದರೆ ಬೆಟ್ಟ ಗುಡ್ಡಗಳಿಗೆ ಬೆಂಕಿ ಇಡುವುದನ್ನು ತಪ್ಪಿಸಬೇಕು. ಬೆಟ್ಟಗಳಲ್ಲಿ ಕಲ್ಲುಗಣಿಗಾರಿಕೆ ನಿಯಂತ್ರಿಸಬೇಕಾಗಿದೆ. ಬಿ.ವಿ.ಗುಂಡಪ್ಪ ಅಧ್ಯಕ್ಷ, ವನ್ಯಜೀವಿ ನಿಸರ್ಗ ಸಂಸ್ಥೆ