

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿ ರೂಪಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಇನ್ನೊಂದು ತಿಂಗಳೊಳಗೆ ಹೊಸ ಪ್ರವಾಸೋದ್ಯಮ ನೀತಿಯನ್ನು ಘೊಷಣೆ ಮಾಡಲಾಗುವುದು ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಗೈಡ್ಸ್ಗಳನ್ನು ನೇಮಕ ಮಾಡಲಾಗುತ್ತಿದೆ ಎಂದು ಹೇಳಿದರು.
ಶಾಂತಿ ಪ್ರಿಯ ಹಾಗೂ ಸರ್ವ ಜನಾಂಗದವರು ಒಂದೇ ಎಂಬ ಆಶಯಕ್ಕೆ ಯಾರೂ ತೊಂದರೆ ಉಂಟು ಮಾಡಬಾರದು. ಕೋಮು ಗಲಭೆ ಸೃಷ್ಟಿಸುವಂತ ದುಷ್ಕರ್ವಿುಗಳನ್ನು ಮಟ್ಟ ಹಾಕಲು ನಮ್ಮ ಸರ್ಕಾರ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಲಿದೆ. ಎಲ್ಲ ಪಕ್ಷಗಳು ಸಾಮಾಜಿಕ ಕಳಕಳಿಯನ್ನು ಮರೆಯಬಾರದು ಎಂದರು.
ಬಿಜೆಪಿ ಶಾಸಕ ಮುನಿರತ್ನ ಅವರ ಲಂಚದ ಬೇಡಿಕೆ ಹಾಗೂ ಜಾತಿ ನಿಂದನೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ಪ್ರಕರಣಗಳನ್ನು ಬೆಂಬಲಿಸುವ ಮನಸ್ಸು ಯಾಕೆ ಬರುತ್ತದೆ ಗೊತ್ತಿಲ್ಲ. ಮುನಿರತ್ನ ತಪ್ಪು ಮಾಡಿಲ್ಲ ಎಂದಾದಲ್ಲಿ ಬಿಜೆಪಿ ನೋಟಿಸ್ ಕೊಟ್ಟಿದ್ದು ಯಾಕೆ? ಅಂತವರನ್ನು ಯಾಕೆ ಬೆಂಬಲಿಸಲಾಗುತ್ತದೆ. ಅವರ ರಕ್ಷಣೆ ಮಾಡುತ್ತಿರುವ ಹಿಂದಿನ ಉದ್ದೇಶವೇನು? ಅವರ ತಪ್ಪು ಕಣ್ಣು ಮುಂದೆ ಇದೆ ಎಂದು ಹೇಳಿದರು.