

ಮೈಸೂರು: ಮೈಸೂರಿನ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್‌ಗೆ ಹೊಸ ಸ್ಪರ್ಶ ನೀಡಲು ನಿರ್ಧರಿಸಲಾಗಿದೆ. ಜತೆಗೆ ರಾಜ್ಯದ 106 ಪಾಲಿಟೆಕ್ನಿಕ್‌ಗಳ ವರದಿ ತರಿಸಿಕೊಂಡು ಅವುಗಳ ಅಭಿವೃದ್ಧಿಪಡಿಸಲು ಶ್ರಮಿಸತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ನಗರದ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್‌ನ 70ನೇ ವರ್ಷದ ಅಮೃತ ಮಹೋತ್ಸವ ವರ್ಷಾಚರಣೆಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
65 ಕೋಟಿ ರೂ. ವೆಚ್ಚದಲ್ಲಿ ಸಿಪಿಸಿ ಕಾಲೇಜಿಗೆ ಆಧುನಿಕ ಸ್ಪರ್ಶ ನೀಡಲು ಚಿಂತಿಸಿದ್ದು, ಈಗಾಗಲೇ ಸಿವಿಲ್ ಇಂಜಿನಿಯರ್ ಕಳುಹಿಸಿ ವರದಿ ಸಿದ್ಧ್ದಪಡಿಸಲಾಗಿದೆ. ಮತ್ತೊಂದೆಡೆ ಕಾಲೇಜಿನಲ್ಲಿ ಎಐ ಮತ್ತು ಸೈಬರ್ ಕುರಿತ ಎರಡು ಹೊಸ ಕೋರ್ಸ್ ಆರಂಭಿಸಲು ಚಿಂತಿಸಿರುವುದರಿಂದ ಕಾಲೇಜಿಗೆ ನೂತನ ತಂತ್ರಜ್ಞಾನ ಅಳವಡಿಸಲಾಗುತ್ತದೆ ಎಂದರು.
ಚಿಂತಾಮಣಿಯಲ್ಲಿ ನಮ್ಮ ತಾತ ಕಟ್ಟಿಸಿರುವ ಪಾಲಿಟೆಕ್ನಿಕ್ 75 ವರ್ಷ ಪೂರೈಸಿದ್ದು, ನನ್ನ ಕ್ಷೇತ್ರದಲ್ಲಿರುವ ಈ ಪಾಲಿಟೆಕ್ನಿಕ್‌ಗೆ ಕಾಯಕಲ್ಪ ಮಾಡಬೇಕೆಂಬ ಆಸೆ ಇದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಯಾವುದೇ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಿದಾಗ ಎಲ್ಲ ರೀತಿಯ ಪ್ರೋತ್ಸಾಹ ನೀಡಿದ್ದಾರೆ. ಅವರು ತಿಳಿಸಿದಂತೆ ಮಹಾರಾಜರು ಕಟ್ಟಿಸಿರುವ ಮಹಾರಾಣಿ ವಿಜ್ಞಾನ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಯನ್ನು ಪರಿಶೀಲಿಸಿ, ನಂತರ ಉತನ್ನತೀಕರಣಗೊಳಿಸಲು ಮುಂದಾಗಲಾಗಿದೆ. ಮಹಾರಾಣಿ ಕಾಲೇಜು ಪಾರಂಪರಿಕ ಕಟ್ಟಡವಾದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಲು ಪಾರಂಪರಿಕ ತಜ್ಞರ ಸಲಹೆ ತೆಗೆದುಕೊಂಡಿದ್ದು, 55 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುತ್ತಿದ್ದು, 5 ಕೋಟಿ ವೆಚ್ಚದ ಕಾಮಗಾರಿಗೆ ಸದ್ಯದಲ್ಲಿಯೇ ಮುಖ್ಯಮಂತ್ರಿ ಶಂಕುಸ್ಥಾಪನೆ ಮಾಡಲಿದ್ದಾರೆ. ಬಾಕಿ 50 ಕೋಟಿ ರೂ. ವೆಚ್ಚದಲ್ಲಿ ಎರಡು ಸಾವಿರ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ವಿದ್ಯಾರ್ಥಿನಿಲಯ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಮೈಸೂರಿಗೆ ಒಂದು ಮಹಿಳಾ ಪಾಲಿಟೆಕ್ನಿಕ್ ಬೇಕೆಂದು ಬೇಡಿಕೆ ಸಲ್ಲಿಸಿದೆ. ಅದು ಹಣಕಾಸು ಇಲಾಖೆಗೆ ಹೋಗಿದ್ದು, ಅದಕ್ಕಾಗಿ ಸ್ಥಳ ನಿಯೋಜನೆ ಮಾಡಿದ್ದೇನೆ. ನಮ್ಮ ಪಾಲಿಟೆಕ್ನಿಕ್ ಕಾಲೇಜಿನಿಂದ ಅಪಾರ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ತಾಂತ್ರೀಕ ಶಿಕ್ಷಣ ಕ್ಷೇತ್ರದಲ್ಲಿ ಹಳೆಯ ಯಂತ್ರಗಳಿದ್ದು, ಹೊಸ ಕಾರ್ಯಕ್ರಮಗಳನ್ನು ರೂಪಿಸಿ ಬೇಡಿಕೆಗಳ ಅನುಗುಣಗಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ತಾಂತ್ರಿಕ ತಂಡವನ್ನು ರಚಿಸಿ ಅಗತ್ಯ ಸೂಚನೆ ಸಲಹೆಗಳನ್ನು ಪಡೆದುಕೊಳ್ಳಬೇಕಿದೆ ಎಂದು ತಿಳಿಸಿದರು.
ಸಿಪಿಸಿ ಕಾಲೇಜು ನಿರ್ಮಾಣಕ್ಕೆ ಸ್ಥಳ ದಾನ ನೀಡಿದ ಸಿ.ಪೆರುಮಾಳ್ ಚೆಟ್ಟಿ ಅವರ ಪುತ್ರ ಪಿ.ಧರ್ಮರಾಜ್ ಚೆಟ್ಟಿ ಮತ್ತು ಮೊಮ್ಮಳಾದ ಜೆ.ಲೋಕೇಶ್ವರಿ ಅವರನ್ನು ಅಭಿನಂದಿಸಲಾಯಿತು. ತಾಂತ್ರಿಕ ಶಿಕ್ಷಣ ಇಲಾಖೆ ಹೆಚ್ಚುವರಿ ನಿರ್ದೇಶಕ ಕೆ.ಎಂ.ಸುರೇಶ್‌ಕುಮಾರ್, ಪ್ರಾಂಶುಪಾಲ ಎಂ.ಪ್ರಕಾಶ್, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎನ್.ಎಸ್.ಬಸವರಾಜು ಇದ್ದರು.