ಹೊಸ ಶೌಚಗೃಹ ನಿರ್ಮಾಣ ಎಂದು?

18SND-01
ತುರ್ವಿಹಾಳದಲ್ಲಿ ನಿರುಪಯುಕ್ತವಾಗಿರುವ ಸಾರ್ವಜನಿಕ ಶೌಚಗೃಹದ ಹೊರನೋಟ.
Published on

ಸಿಂಧನೂರು: ತಾಲೂಕಿನ ತುರ್ವಿಹಾಳದಲ್ಲಿ ಸಾರ್ವಜನಿಕ ಶೌಚಗೃಹ ಇಲ್ಲದೆ ಊರಿನ ಜನರು ಬಯಲನ್ನೇ ಅವಲಂಬಿಸುವಂತಾಗಿದೆ.

ತುರ್ವಿಹಾಳ ಪಟ್ಟಣದಲ್ಲಿ 16 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. 14 ವಾರ್ಡ್‌ಗಳಿದ್ದು, ಪ್ರತಿ ವರ್ಷ ಶೌಚಗೃಹ ನಿರ್ಮಾಣಕ್ಕೆ ಅನುದಾನ ನಿಗದಿ ಮಾಡುತ್ತದೆ. ಆದರೆ, ಎಲ್ಲಿಯೂ ಹೈಟೆಕ್ ಶೌಚಗೃಹ ಕಟ್ಟಿಲ್ಲ.

ವಾರ್ಡ್ ನಂ.11ರ ಬಸ್ ನಿಲ್ದಾಣದ ಬಳಿ ಶೌಚಗೃಹ ನಿರ್ಮಾಣ ಮಾಡಿದ್ದು, ಇದುವರೆಗೆ ಬಳಕೆಗೆ ನೀಡಿಲ್ಲ. ಇದರಿಂದ ಶೌಚಗೃಹದ ಸುತ್ತ ಜಾಲಿಗಿಡಗಳು ಬೆಳೆದಿವೆ.ಪಟ್ಟಣದ ಹೃದಯ ಭಾಗದಲ್ಲಿ ಎಲ್ಲರಿಗೂ ಅನುಕೂಲಕರವಾಗಿರುವ ಈ ಶೌಚಗೃಹ ನಿರ್ವಹಣೆಗೆ ಪಪಂ ಅಸಡ್ಡೆ ತೋರಿದೆ.

ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರ ಊರಾಗಿದ್ದರು, ಅಭಿವೃದ್ಧಿ ಕಾಣದಿರುವುದು ದುರಂತವೇ ಸರಿ ಎಂಬ ಮಾತುಗಳು ಕೇಳಿಬರುತ್ತಿವೆ. ಪಟ್ಟಣ ದೊಡ್ಡದಾಗಿ ಬೆಳೆಯುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ಸೌಲಭ್ಯ ಒದಗಿಸಿಕೊಡುವಲ್ಲಿ ಪಪಂ ವಿಫಲವಾಗಿದೆ ಎಂಬ ಆರೋಪಗಳೂ ಇವೆ.

ಶಾಸಕ ಆರ್.ಬಸನಗೌಡ ತುರ್ವಿಹಾಳ ಇತ್ತೀಚೆಗೆ ಕೋಟ್ಯಂತರ ರೂ.ವೆಚ್ಚದಲ್ಲಿ ರಸ್ತೆ ಸೇರಿ ಇತರ ಸೌಕರ್ಯ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಹೈಟೆಕ್ ಶೌಚಗೃಹ ನಿರ್ಮಾಣ ಏಕೆ ಮಾಡಲಿಲ್ಲ ಎನ್ನುವುದು ಜನರ ಪ್ರಶ್ನೆಯಾಗಿದೆ.

ಅಧ್ಯಕ್ಷ, ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘ

ಅನ್ವರ್‌ಪಾಷಾ ದಳಪತಿ

ತುರ್ವಿಹಾಳ ಪಟ್ಟಣದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಶೌಚಗೃಹ ಉಪಯೋಗಕ್ಕೆ ಬಾರದೆ ಹಾಳಾಗಿದ್ದು, ಅಧಿಕಾರಿಗಳ ನಿರ್ಲಕ್ಷೃವೇ ಕಾರಣ. ಪಟ್ಟಣದಲ್ಲಿ ಎಲ್ಲಿಯೂ ಸುಸಜ್ಜಿತ ಶೌಚಗೃಹಗಳಿಲ್ಲ. ಕೂಡಲೇ ನಿರ್ಮಾಣ ಮಾಡಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದೆ.

ಮುಖ್ಯಾಧಿಕಾರಿ, ತುರ್ವಿಹಾಳ ಪಪಂ

ಸಾಬಣ್ಣ

ತುರ್ವಿಹಾಳ ಪಟ್ಟಣದಲ್ಲಿ ಹೊಸ ಶೌಚಗೃಹ ನಿರ್ಮಿಸಲಾಗುವುದು. ಹಳೇ ಶೌಚಗೃಹ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಬಸ್ ನಿಲ್ದಾಣದ ಬಳಿ ಇರುವ ಶೌಚಗೃಹ ಬಳಕೆ ಆಗದಿರುವ ಬಗ್ಗೆ ಮಾಹಿತಿ ಪಡೆದು ಕ್ರಮಕೈಗೊಳ್ಳುವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net