

ಕಂಪ್ಲಿ: ಇಲ್ಲಿನ ಷಾ.ಮಿಯಾಚಂದ್ ಸರ್ಕಾರಿ ಹೈಸ್ಕೂಲ್ ಎದುರುಗಡೆ ಸುಸಜ್ಜಿತ ಆಧುನಿಕ ಮಾದರಿಯ ಪೊಲೀಸ್ ಠಾಣೆ ಕಟ್ಟಡ ಸಿದ್ಧವಿದ್ದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇದೇ ಆ.15ರಂದು ಉದ್ಘಾಟನೆಗೊಳ್ಳಬಹುದೆನ್ನುವ ಮಾತುಗಳು ಕೇಳಿ ಬರುತ್ತಿವೆ.
2022ರ ಏಪ್ರಿಲ್ 16ರಂದು ಅಂದಿನ ಗೃಹ ಸಚಿವ ಅರಗ ಜ್ಞಾನೇಂದ್ರ 2.7ಕೋಟಿ ರೂ.ಗಳ ವೆಚ್ಚದಲ್ಲಿ ನೂತನ ಪೊಲೀಸ್ ಠಾಣೆ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಗೊಂಡು ಐದಾರು ತಿಂಗಳಾದರೂ ಉದ್ಘಾಟನೆಗೆ ಮುಹೂರ್ತ ಕೂಡಿ ಬಂದಿಲ್ಲ.
ಇದನ್ನೂ ಓದಿ: ಮೈಸೂರು ಪೊಲೀಸ್ ಠಾಣೆಗಳಲ್ಲಿ ‘ಲೋಕಸ್ಪಂದನಾ’ ಜಾರಿ
ಪೊಲೀಸ್ ಠಾಣೆ ಕಟ್ಟಡ ಜಿ ಪ್ಲಸ್ ಟೂ ಮಾದರಿಯಲ್ಲಿ ನಿರ್ಮಾಣಗೊಂಡಿದೆ. ನೆಲಸಮಾನ ಕಟ್ಟಡದಲ್ಲಿ ಪಿಎಸ್‌ಐ ಚೇಂಬರ್, ವಿಜಿಟರ್ಸ್ ರೂಮ್, ಸಿಬ್ಬಂದಿ ಕಚೇರಿ ಕೊಠಡಿ, ಸ್ತ್ರೀ ಪುರುಷರ ಪ್ರತ್ಯೇಕ ಎರಡು ಸೆಲ್‌ಗಳಿವೆ. ಮೊದಲ ಮಹಡಿಯಲ್ಲಿ ಪಿಐ/ಸಿಪಿಐ ಚೇಂಬರ್, ದಾಖಲೆಗಳ ಸಂಗ್ರಹ ಕೊಠಡಿ, ಶೌಚಗೃಹ, ಸಿಬ್ಬಂದಿ ಕಚೇರಿ ಕೊಠಡಿಗಳಿವೆ.
ಎರಡನೇ ಮಹಡಿಯಲ್ಲಿ 10.14ಮೀ ಮತ್ತು 6ಮೀ.ಉದ್ದಗಲದ ಆಧುನಿಕ ಮಾದರಿಯ ಕಾನ್ಫರೆನ್ಸ್ ಹಾಲ್ ಇದೆ. ಶೌಚಗೃಹ ಹೊಂದಿರುವ ಪ್ರತ್ಯೇಕವಾದ ಸ್ತ್ರೀ, ಪುರುಷ ಪೊಲೀಸ್ ಸಿಬ್ಬಂದಿಯ ವಿಶ್ರಾಂತಿ ಕೊಠಡಿಗಳಿವೆ. ಸೋಲಾರ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಿಸಿ ಮತ್ತು ತಣ್ಣಗಿನ ನೀರು ಒದಗಿಸುವ ವ್ಯವಸ್ಥೆಯೂ ಇದೆ. ಆವರಣದಲ್ಲಿ ವೆಹಿಕಲ್ ಶೆಡ್ ಕೂಡಾ ನಿರ್ಮಾಣಗೊಂಡಿದೆ.
ಸದ್ಯ ಇರುವ ಪೊಲೀಸ್ ಠಾಣೆ ಕಟ್ಟಡ 1,912 ಕ್ಕೂ ಮುಂಚೆ ನಿರ್ಮಿಸಿದ ಬ್ರಿಟೀಷ್ ಮಾದರಿ ಕಟ್ಟಡವಾಗಿದೆ. ಇದರಲ್ಲಿ ಕೇವಲ ಎರಡು ಕೋಣೆಗಳು ಮಾತ್ರ ಇವೆ. ಮೇಲ್ಛಾವಣಿ ಶಿಥಿಲಗೊಂಡು ಮಳೆಗೆ ಸೋರುತ್ತದೆ.
ಆಗಾಗ ಮೇಲ್ಚಾವಣಿಯನ್ನು ದುರಸ್ತಿಗೊಳಿಸಿದೆ. ದಾಖಲೆಗಳನ್ನು ಸಂಗ್ರಹಿಸಿಡಲು ಸ್ಥಳಾವಕಾಶದ ಕೊರತೆ ಕಾಡುತ್ತಿದೆ. ಸಾರ್ವಜನಿಕರು, ಸಿಬ್ಬಂದಿ ಕುಳಿತುಕೊಳ್ಳಲು ಸ್ಥಳ ಸಾಲದಾಗಿದೆ. ಇದಕ್ಕಾಗಿ ಸಿದ್ಧಗೊಂಡ ನೂತನ ಕಟ್ಟಡಕ್ಕೆ ವರ್ಗಗೊಳ್ಳುವುದು ಅಗತ್ಯವಿದೆ.
ವಿಧಾನಸಭೆ ಚುನಾವಣೆಗೂ ಮುನ್ನಾ ನೂತನ ಪೊಲೀಸ್ ಠಾಣೆ ಕಟ್ಟಡ ಉದ್ಘಾಟನೆಗೊಳ್ಳಬೇಕಿತ್ತು. ನಾನಾ ಕಾರಣಗಳಿಂದ ಉದ್ಘಾಟನೆಗೊಳ್ಳಲಿಲ್ಲ. ಗೃಹ ಸಚಿವರೊಂದಿಗೆ ಮಾತನಾಡಿ ಆದಷ್ಟು ಬೇಗನೆ ಪೊಲೀಸ್ ಠಾಣೆ ಕಟ್ಟಡ ಉದ್ಘಾಟನೆಗೆ ದಿನಾಂಕ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿಯೇ ಜಿ ಪ್ಲಸ್ ಟು ಮಾದರಿಯ ಸುಸಜ್ಜಿತ ಪೊಲೀಸ್ ಠಾಣೆ ಕಟ್ಟಡವಾಗಿದೆ. ಗೃಹ ಇಲಾಖೆಯ ಅನುದಾನದಡಿ 1.59ಕೋಟಿ ರೂ. ವೆಚ್ಚದಲ್ಲಿ 20.38ಮೀ, 10.14ಮೀ ಉದ್ದಗಲದ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ ಎಂದು ಬೆಂಗಳೂರಿನ ಬಿಜೆಆರ್ ಕನ್ನಸ್ಟ್ರಕ್ಸನ್ ಪ್ರೊಜೆಕ್ಟ್ ಇಂಜಿನಿಯರ್ ನಾಗರಾಜ ಪಾಟೀಲ್ ತಿಳಿಸಿದ್ದಾರೆ.