ಹೊಸ ಪರೀಕ್ಷಾ ಪದ್ಧತಿ ಕಾರ್ಯಾಗಾರ ನಾಳೆ

ramesh
ಸುದ್ದಿಗೋಷ್ಠಿಯಲ್ಲಿ ಎನ್.ರಮೇಶ್ ಮಾತನಾಡಿದರು. ರಂಗಪ್ಪ, ಕಿಶೋರ್, ರುದ್ರಸ್ವಾಮಿ, ಮಹೇಶ್ವರಪ್ಪ, ಜಯಣ್ಣ ಗೌಡ, ಪ್ರವೀಣ್ ಮುಂತಾದವರಿದ್ದರು.
Published on

ಶಿವಮೊಗ್ಗ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಿರುವ ಹೊಸ ಪರೀಕ್ಷಾ ಪದ್ಧತಿ ಕುರಿತು ನಗರದ ಕುವೆಂಪು ರಂಗಮಂದಿರದಲ್ಲಿ ನ.8ರ ಬೆಳಗ್ಗೆ 10 ರಿಂದ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಹಾಗೂ ಪ್ರತಿ ಶಾಲೆಯ ಓರ್ವ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಶಿಕ್ಷಣ ಇಲಾಖೆ ಹಾಗೂ ಪ್ರಿಯದರ್ಶಿನಿ ಆಂಗ್ಲ ಪ್ರೌಢಶಾಲೆ ಆಶ್ರಯದಲ್ಲಿ ಆಯೋಜಿಸಿರುವ ಕಾರ್ಯಾಗಾರದಲ್ಲಿ 1,200 ಶಿಕ್ಷಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಗ್ಲೋಬಲ್ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಎನ್.ರಮೇಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಶೈಕ್ಷಣಿಕ ವರ್ಷದಿಂದ 8, 9 ಮತ್ತು 10ನೇ ತರಗತಿಗಳ ವಾರ್ಷಿಕ ಪರೀಕ್ಷಾ ಪದ್ಧತಿಯಲ್ಲಿ ಬಹಳಷ್ಟು ಬದಲಾವಣೆ ಮಾಡಲಾಗಿದೆ. ಹೊಸ ಪದ್ಧತಿ ಬಗ್ಗೆ ಶಿಕ್ಷಕರು ಹಾಗೂ ಪಾಲಕರಲ್ಲಿ ಗೊಂದಲಗಳಿವೆ. ಶಿಕ್ಷಕರ ಗೊಂದಲ ನಿವಾರಣೆಯಾದರೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಇಷ್ಟು ವರ್ಷ 8 ಮತ್ತು 9ನೇ ತರಗತಿಗಳಿಗೆ ಶಾಲಾ ಹಂತದಲ್ಲಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. 10ನೇ ತರಗತಿಗೆ ಒಂದು ವಾರ್ಷಿಕ ಹಾಗೂ ಒಂದು ಪೂರಕ ಪರೀಕ್ಷೆಯನ್ನು ಪಬ್ಲಿಕ್ ಪರೀಕ್ಷೆಯಾಗಿ ಮಾಡಲಾಗುತ್ತಿತ್ತು. ಈ ವರ್ಷದಿಂದ 8, 9ನೇ ತರಗತಿಗಳಿಗೂ ಪಬ್ಲಿಕ್ ಪರೀಕ್ಷೆ ಇರಲಿದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಈ ಹಿಂದೆ ಎರಡು ಬಾರಿ ಮಾತ್ರ ನಡೆಯುತ್ತಿತ್ತು. ಈಗ ವರ್ಷದಲ್ಲಿ ಮೂರು ಬಾರಿ ನಡೆಯುತ್ತಿದೆ. ಮೊದಲ ಮತ್ತು ಎರಡನೇ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಕೂಡ ಉತ್ತೀರ್ಣರಾಗುವ ಅವಕಾಶವಿದೆ ಎಂದು ತಿಳಿಸಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ದೇಶಕ ಗೋಪಾಲಕೃಷ್ಣ, ಬೆಂಗಳೂರು ವಿಜಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಟಿ.ಎನ್.ಚಂದ್ರಕಾಂತ್, ಡಯಟ್ ಉಪನ್ಯಾಸಕ ಡಾ. ಎನ್.ಹರಿಪ್ರಸಾದ್, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಚಾರ್ಯ ಬಸವರಾಜಪ್ಪ ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಎನ್.ರಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ಉಪನ್ಯಾಸಕರಾದ ರುದ್ರಸ್ವಾಮಿ, ರಂಗಪ್ಪ, ಮಹೇಶ್ವರಪ್ಪ, ಕಿಶೋರ್, ಜಯಣ್ಣ ಗೌಡ, ಉಪ ಪ್ರಾಚಾರ್ಯ ಪ್ರವೀಣ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net