

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಗಾಂಜಾಘಾಟು, ರಿಯಲ್ ಎಸ್ಟೇಟ್ ಮಾಫಿಯಾ, ಸರಣಿ ಸರಗಳವು, ಅಕ್ರಮ ಮದ್ಯ ಮಾರಾಟ, ಸಂಚಾರ ನಿಯಮ ಉಲ್ಲಂಘನೆ ಅವ್ಯಾಹತ, ರೌಡಿಗಳ ಅಟ್ಟಹಾಸ ಹೀಗೆ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳು ಎಲ್ಲೆ ಮೀರಿರುವ ಹೊತ್ತಿನಲ್ಲಿ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.
ಬೆಂಗಳೂರಿನ ಗಡಿ ಹಂಚಿಕೊಂಡಿರುವ ನಾಲ್ಕೂ ತಾಲೂಕು ಸೇರಿ ನಗರ ವ್ಯಾಪ್ತಿಯ ಆನೇಕಲ್, ಗ್ರಾಮಾಂತರ ಜಿಲ್ಲೆಗೆ ಸೇರ್ಪಡೆಯಾಗಿದೆ. ಅಪರಾಧ ಚಟುವಟಿಗಳನ್ನು ಪರಿಣಾಮಕಾರಿಯಾಗಿ ಮಟ್ಟಹಾಕುವ ಸವಾಲುಗಳು ಎಸ್‌ಪಿ ಮುಂದಿವೆ. ಆಂಧ್ರ ಹಾಗೂ ತಮಿಳುನಾಡು ಗಡಿಯನ್ನೂ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಅನ್ಯರಾಜ್ಯದ ಪಾತಕಿಗಳ ದುಷ್ಕೃತ್ಯಗಳೂ ಸಾಮಾನ್ಯ ಎನ್ನುವಂತಾಗಿದೆ. ಹೊಸೂರು ಮೂಲಕ ಆನೇಕಲ್ ಗಡಿ ಪ್ರವೇಶಿಸುವ ಹಾಗೂ ಆಂಧ್ರ ಗಡಿಯಿಂದ ಹೊಸಕೋಟೆ ಪ್ರವೇಶಿಸುವ ಗಾಂಜಾ, ರಕ್ತಚಂದನ ಅಕ್ರಮ ದಂಧೆ ಕಡಿವಾಣಕ್ಕೆ ಪೊಲೀಸ್ ಇಲಾಖೆ ಮತ್ತಷ್ಟು ಗಟ್ಟಿಯಾಗಬೇಕಿದೆ. ಅಧಿಕಾರಿ ವಹಿಸಿಕೊಂಡ ಹಿನ್ನೆಲೆಯಲ್ಲಿ ಎಸ್ಪಿ ಅವರು ವಿಜಯವಾಣಿಯೊಂದಿಗೆ ಮಾತನಾಡಿದ್ದಾರೆ.
ಪ್ರಶ್ನೆ: ಗ್ರಾಮೀಣ ಭಾಗದ ಗೂಡಂಗಡಿಗಳಲ್ಲಿ ಮದ್ಯ ಮಾರಾಟ ಅವ್ಯಾಹತವಾಗಿದ್ದು, ನಿಯಂತ್ರಣ ಹೇಗೆ?
ಎಸ್‌ಪಿ: ಇದೊಂದು ಪಿಡುಗಾಗಿರುವುದು ನಮ್ಮ ಗಮನಕ್ಕೂ ಬಂದಿದೆ, ಅಬಕಾರಿ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಜಂಟಿ ಕಾರ್ಯಾಚರಣೆ ಮೂಲಕ ಇದರ ತಡೆಗೆ ಕ್ರಮಕೈಗೊಳ್ಳಲಾಗುವುದು.
ಪ್ರಶ್ನೆ: ಜಿಲ್ಲೆಯಲ್ಲಿ ಗಾಂಜಾ ಧಂದೆ ಬೇರು ಬಿಟ್ಟಿದೆ, ಆಗಾಗ ಮಾರಾಟ ಆರೋಪಿಗಳನ್ನು ಬಂಧಿಸುವುದು ಜಪ್ತಿ ಮಾಡುವುದು ನಡೆಯುತ್ತಿದೆ. ಪರಿಣಾಮಕಾರಿಯಾಗಿ ಬ್ರೇಕ್ ಹಾಕಲು ಸಾಧ್ಯವಿಲ್ಲವೆ?
ಎಸ್‌ಪಿ: ಖಂಡಿದ ಇದೆ, ಗಾಂಜಾ ದಂಧೆಕೋರರನ್ನು ಬೇರುಸಹಿತ ಕಿತ್ತುಹಾಕುವ ಪ್ರಯತ್ನ ನಡೆಯುತ್ತಿದೆ. ಇದೊಂದು ಗುಪ್ತಜಾಲವಾಗಿದ್ದು, ಸಾರ್ವಜನಿಕರೂ ಪೊಲೀಸರೊಂದಿಗೆ ಕೈಜೋಡಿಸಬೇಕು, ಆಗ ಮಾತ್ರ ಬೇರುಮಟ್ಟದಿಂದಲೇ ಇದಕ್ಕೆ ಕಡಿವಾಣ ಹಾಕಬಹುದು.