

ಹುಬ್ಬಳ್ಳಿ: ಉದ್ಯೋಗ ಆಧಾರಿತ ಪ್ರೋತ್ಸಾಹ ಧನ (ಇಎಲ್ಐ) ನೂತನ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಆಗಸ್ಟ್ ನಿಂದ ಜಾರಿಗೆ ಬರಲಿದೆ. ಇದರ ಮೂಲಕ ಹೆಚ್ಚು ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಭದ್ರತೆ ಅಧಿಕಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಹುಬ್ಬಳ್ಳಿ ವಲಯ ಕಚೇರಿಯ ಕ್ಷೇತ್ರಿಯ ಭವಿಷ್ಯನಿಧಿ ಆಯುಕ್ತ ಪರಿಪೂರ್ಣ ನಾಥ ತಿಳಿಸಿದರು.
ನಗರದ ಪಿಎಫ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಂಪನಿ ಅಥವಾ ಸಂಸ್ಥೆಯಲ್ಲಿ ಮೊದಲ ಬಾರಿ ಉದ್ಯೋಗಕ್ಕೆ ಸೇರುವ ಉದ್ಯೋಗಿಗೆ ಈ ಯೋಜನೆ ಅನ್ವಯವಾಗಲಿದೆ. ಇದರಡಿ ಕೇಂದ್ರ ಸರ್ಕಾರವು ಎರಡು ಕಂತುಗಳಲ್ಲಿ ಗರಿಷ್ಠ 15 ಸಾವಿರ ರೂ. ಪ್ರೋತ್ಸಾಹ ಧನ ನೀಡಲಿದೆ. ಇದಕ್ಕಾಗಿ ಒಂದು ಲಕ್ಷ ಕೋಟಿ ರೂ. ನಿಧಿ ಇಡಲಾಗಿದೆ. ಯೋಜನೆ ಮೂಲಕ 3.5 ಕೋಟಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಹೊಂದಲಾಗಿದೆ ಎಂದರು.
ಉದ್ಯೋಗದಾತರಿಗೂ ಹೆಚ್ಚುವರಿ ಉದ್ಯೋಗ ಸೃಷ್ಟಿಗಾಗಿ ಎರಡು ವರ್ಷಗಳವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಉತ್ಪಾದನಾ ವಲಯಕ್ಕೆ ಇನ್ನೂ ಎರಡು ವರ್ಷಗಳವರೆಗೆ ವಿಸ್ತ್ರತ ಪ್ರಯೋಜನಗಳನ್ನು ನೀಡುವ ಉದ್ದೇಶ ಹೊಂದಲಾಗಿದೆ. ದೇಶದ 4.1 ಕೋಟಿ ಯುವಕರಿಗೆ ಉದ್ಯೋಗ, ಕೌಶಲ, ಇತರ ಅವಕಾಶಗಳನ್ನು ಒದಗಿಸಲು ಪ್ರಧಾನ ಮಂತ್ರಿಯವರ ಐದು ಯೋಜನೆಗಳ ಪ್ಯಾಕೇಜ್ ನ ಭಾಗವಾಗಿ ಕೇಂದ್ರ ಬಜೆಟ್ ನಲ್ಲಿ ಯೋಜನೆ ಘೋಷಿಸಲಾಗಿದೆ ಎಂದರು.
ಇಪಿಎಫ್ಒನಲ್ಲಿ ನೋಂದಾಯಿತ ಮೊದಲ ಬಾರಿಯ ಉದ್ಯೋಗಿಗಳಿಗೆ ಗರಿಷ್ಠ 15 ಸಾವಿರ ರೂ. ಒಂದು ತಿಂಗಳ ಇಪಿಎಫ್ ವೇತನವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. 1 ಲಕ್ಷ ರೂ.ವರೆಗಿನ ವೇತನ ಹೊಂದಿರುವ ಉದ್ಯೋಗಿಗಳು ಇದಕ್ಕೆ ಅರ್ಹರಾಗಿರುತ್ತಾರೆ. ಮೊದಲ ಕಂತನ್ನು 6 ತಿಂಗಳ ಸೇವೆಯ ನಂತರ ಮತ್ತು 2ನೇ ಕಂತನ್ನು 12 ತಿಂಗಳ ಸೇವೆಯ ನಂತರ ನೀಡಲಾಗುತ್ತದೆ. ಉದ್ಯೋಗಿಯು ಆರ್ಥಿಕ ಸಾಕ್ಷರತೆ ತರಬೇತಿ ಪೂರ್ಣಗೊಳಿಸಬೇಕಾಗುತ್ತದೆ. ತರಬೇತಿಯನ್ನು ಆನ್ ಲೈನ್ ಮೂಲಕ ನೀಡಲಾಗುತ್ತದೆ ಎಂದರು.
ಉದ್ಯೋಗದಾತರಿಗೆ ಬೆಂಬಲ ನೀಡಲು ಪ್ರೋತ್ಸಾಹಧನ ಪಡೆಯುವ ಅವಕಾಶ ನೀಡಲಾಗಿದೆ. ಕನಿಷ್ಠ ಆರು ತಿಂಗಳವರೆಗೆ ನಿರಂತರ ಉದ್ಯೋಗ ಹೊಂದಿರುವ ಪ್ರತಿ ಹೆಚ್ಚುವರಿ ಉದ್ಯೋಗಿಗೆ ಸರ್ಕಾರವು ಎರಡು ವರ್ಷಗಳವರೆಗೆ ತಿಂಗಳಿಗೆ 3,000 ರೂ.ಗಳವರೆಗೆ ಪ್ರೋತ್ಸಾಹಧನ ನೀಡಲಿದೆ.
ಪಾವತಿ ಕಾರ್ಯವಿಧಾನ:
ಯೋಜನೆಯಡಿ ಎಲ್ಲ ಪಾವತಿಗಳನ್ನು "ಆಧಾರ್ ಬ್ರಿಡ್ಜ್ ಪೇಮೆಂಟ್ ಸಿಸ್ಟಂ'(ಎಬಿಪಿಎಸ್) ಬಳಸಿ "ಡಿಬಿಟಿ' (ನೇರ ಲಾಭ ವರ್ಗಾವಣೆ) ಮೂಲಕ ಮಾಡಲಾಗುತ್ತದೆ. ಉದ್ಯೋಗದಾತರಿಗೆ ಪಾವತಿಗಳನ್ನು ನೇರವಾಗಿ ಅವರ ಪ್ಯಾನ್-ಲಿಂಕ್ ಮಾಡಿದ ಖಾತೆಗಳಿಗೆ ಮಾಡಲಾಗುತ್ತದೆ.
ಎಲ್ಲ ಕ್ಷೇತ್ರಗಳಲ್ಲಿ ವಿಶೇಷವಾಗಿ ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ. ಜತೆಗೆ ಮೊದಲ ಬಾರಿಗೆ ಕಾರ್ಯಪಡೆಗೆ ಸೇರುವ ಯುವಕರನ್ನು ಪ್ರೋತ್ಸಾಹಿಸಲು ಯೋಜನೆ ಜಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಲೆಕ್ಕಾಧಿಕಾರಿ ವಿನಾಯಕ ಸಂಕಪಾಳ್ಯ, ಪ್ರವರ್ತನಾಧಿಕಾರಿಗಳಾದ ಜೆ. ಜಾಫರ್, ಪ್ರಭಾಕರ ತಳವಾರ ಇದ್ದರು.