ಕಾರ್ಮಿಕರಿಗೆ ನೂತನ ಯೋಜನೆ ಶೀಘ್ರ ಜಾರಿ

6
Published on

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ನಕಲಿ ಕಾರ್ಮಿಕರ ಕಾರ್ಯಾಚರಣೆ ಮುಕ್ತಾಯವಾದ ನಂತರ ಕಾರ್ಮಿಕರಿಗೆ ನೂತನ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಚಿಂತಿಸಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದ ಅಧ್ಯಕ್ಷ ಪಿ.ರಾಜು ತಿಳಿಸಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿ, ನಕಲಿ ಕಾರ್ಮಿಕರ ನಿರ್ಮೂಲನೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಮಾಡಲಾಗಿತ್ತು. ಅದರಂತೆ ಕುಟುಂಬದ ಎಲ್ಲರ ಆಧಾರ್ ಕಾರ್ಡ್ ಪಡೆದು ಆ ಮೂಲಕ ನಕಲಿ ಕಾರ್ಮಿಕರನ್ನು ಪತ್ತೆ ಹಚ್ಚಿ ತಡೆಗಟ್ಟಬಹುದು ಎಂಬ ಸಲಹೆಯನ್ನು ಸಚಿವರು ಸ್ವೀಕರಿಸಿ ಆ ಮೂಲಕ ಕಾರ್ಯಾಚರಣೆಗೆ ಮುಂದಾಗಿದ್ದಾರೆ ಎಂದರು.
ನಕಲಿ ಕಾರ್ಮಿಕರ ಹಾವಳಿಯಿಂದ ಈ ಹಿಂದೆ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಸಚಿವರು ಕಡಿತಗೊಳಿಸಿದ್ದಾರೆ. ಕಾರ್ಮಿಕರು ನೋಂದಣಿ ಮಾಡಿಕೊಂಡಾಗ 25,30,000 ಕಾರ್ಮಿಕರು ಇದ್ದರು. ಈಗ ಅದು 50 ಲಕ್ಷ ದಾಟಿರುವ ಕಾರಣ ಪ್ರೋತ್ಸಾಹ ಧನವನ್ನು ಕಡಿತಗೊಳಿಸಿದ್ದಾರೆ ಎಂದು ಹೇಳಿದರು.
ನಕಲಿ ಕಾರ್ಮಿಕರ ಕಾರ್ಯಾಚರಣೆ ಮುಕ್ತಾಯವಾದ ನಂತರ ಕಾರ್ಮಿಕರಿಗೆ ನೂತನ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಚಿಂತಿಸಿದೆ. ಹೀಗಾಗಿ ಸಂಘ ನವೀಕರಣಗೊಂಡ ನಂತರ ಮುಖ್ಯಮಂತ್ರಿ ಮತ್ತು ಕಾರ್ಮಿಕ ಸಚಿವರನ್ನು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.
ರಾಜ್ಯ ಕಾರ್ಯಾಧ್ಯಕ್ಷೆ ಸುವರ್ಣಮ್ಮ (ದಾವಣಗೆರೆ), ಕಚೇರಿ ಕಾರ್ಯದರ್ಶಿ ಚಂದ್ರಶೇಖರ (ಅಶೋಕಪುರಂ), ಮೈಸೂರು ಜಿಲ್ಲಾಧ್ಯಕ್ಷ ನಂಜುಂಡಸ್ವಾಮಿ, ಚಾಮರಾಜನಗರ ಜಿಲ್ಲಾಧ್ಯಕ್ಷ ಕುಮಾರಾಚಾರಿ, ಹಾಸನ ಜಿಲ್ಲಾಧ್ಯಕ್ಷ ಲೋಕೇಶ್‌ಕುಮಾರ್, ತುಮಕೂರು ಜಿಲ್ಲಾಧ್ಯಕ್ಷ ಗುರುಪ್ರಸಾದ್, ದಾವಣಗೆರೆ ಜಿಲ್ಲಾಧ್ಯಕ್ಷ ಬಸವರಾಜು, ಬಳ್ಳಾರಿ ಜಿಲ್ಲಾಧ್ಯಕ್ಷ ಅಂಜಿನೇಯ, ಶಿವಮೊಗ್ಗ ಜಿಲ್ಲಾಧ್ಯಕ್ಷೆ ಶ್ವೇತಾ, ಬಾಗಲಕೋಟ ಜಿಲ್ಲಾಧ್ಯಕ್ಷ ರಾಜಶೇಖರ ಮಂಗಳೂರ, ವಿಜಯಪುರ ಜಿಲ್ಲಾಧ್ಯಕ್ಷ ಸಾಗರ್, ಗದಗ ಜಿಲ್ಲಾಧ್ಯಕ್ಷ ಬಸಪ್ಪ ಕುರಿ, ಕೊಪ್ಪಳ ಜಿಲ್ಲಾಧ್ಯಕ್ಷ ರಾಕೇಶ್, ಕಲಬುರಗಿ ಜಿಲ್ಲಾಧ್ಯಕ್ಷೆ ಚಂದ್ರಕಲಾ ಪಿ.ಪಾಟೀಲ, ಧಾರವಾಡ ಜಿಲ್ಲಾಧ್ಯಕ್ಷ ಮಂಜುನಾಥ, ಬೀದರ್ ಜಿಲ್ಲಾಧ್ಯಕ್ಷ ಸಂತೋಷ ಶಿರಗೇರಿ, ಹಾವೇರಿ ಜಿಲ್ಲಾಧ್ಯಕ್ಷೆ ಜ್ಯೋತಿ ಮಂಜುನಾಥ್, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಣ್ಣ, ಶಿರಗುಪ್ಪ ತಾಲೂಕು ಅಧ್ಯಕ್ಷ ಶಿವಪ್ಪ, ಕರಗೂಡು ತಾಲೂಕು ಅಧ್ಯಕ್ಷ ಮೂರ್ತಿ, ಕಂಪ್ಲಿ ತಾಲೂಕು ಅಧ್ಯಕ್ಷ ಅಂಜಿನೇಯ, ದಯಾನಂದ ಇತರರು ಇದ್ದರು.
ಇದೇ ಸಂದರ್ಭದಲ್ಲಿ ವಿವಿಧ ಜಿಲ್ಲೆಗೆ ನೇಮಕಗೊಂಡ ನೂತನ ಜಿಲ್ಲಾಧ್ಯಕ್ಷರಿಗೆ ನೇಮಕಾತಿ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net