ಮನೆ ನಿರ್ಮಾಣಕ್ಕೆ ಹೊಸ ನಿಯಮ: ತೀವ್ರ ವಿರೋಧ

VISHWA C.L - Copy
Published on

ಮಡಿಕೇರಿ: ಮನೆ ಹಾಗೂ ಕಟ್ಟಡ ನಿರ್ಮಾಣ ಮಾಡಬೇಕಾದರೆ ಪ್ರಾರಂಭಿಕ ಪ್ರಮಾಣಪತ್ರ(ಸಿಸಿ) ಮತ್ತು ಸ್ವಾಧಿನಾನುಭವ ಅಥವಾ ವಾಸ ಯೋಗ್ಯ ಪ್ರಮಾಣ ಪತ್ರ(ಒಸಿ) ಪಡೆದುಕೊಳ್ಳುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಈ ನಿಯಮ ಗ್ರಾ.ಪಂ ವ್ಯಾಪ್ತಿಗೂ ಅನ್ವಯಿಸಲಿದೆ ಎಂದು ಸರ್ಕಾರ ಹೇಳಿದ್ದು, ಇದನ್ನು ತೀವ್ರವಾಗಿ ವಿರೋಧಿಸುವುದಾಗಿ ನಂಜರಾಯಪಟ್ಟಣ ಗ್ರಾ.ಪಂ ಅಧ್ಯಕ್ಷ ಸಿ.ಎಲ್.ವಿಶ್ವ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರ್ಕಾರದ ಹೊಸ ನಿಯಮದಿಂದ ಗ್ರಾಮೀಣ ಭಾಗದ ಕಡು ಬಡವರು, ಬಡವರು, ಕೂಲಿ ಕಾರ್ಮಿಕರು, ದುರ್ಬಲರು ಹಾಗೂ ವಸತಿ ರಹಿತ ಜನಸಾಮಾನ್ಯರು ಮನೆ ನಿರ್ಮಿಸಿಕೊಳ್ಳುವ ಸಂದರ್ಭ ಹಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಸ್ವಂತ ಸೂರು ಹೊಂದಬೇಕೆನ್ನುವ ಬಡವರ ಕನಸು ಕನಸಾಗಿಯೇ ಉಳಿಯಲಿದೆ. ಆದ್ದರಿಂದ ಸರ್ಕಾರ ಗ್ರಾಮೀಣ ಜನರ ಹಿತದೃಷ್ಟಿಯಿಂದ ನಿಯಮಕ್ಕೆ ತಿದ್ದುಪಡಿ ತಂದು ಗ್ರಾ.ಪಂ ವ್ಯಾಪ್ತಿಗೆ ಸರಳ ನಿಯಮಗಳನ್ನು ರೂಪಿಸಬೇಕೆಂದು ಒತ್ತಾಯಿಸಿದ್ದಾರೆ.

ವಸತಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದಂತೆ ನೂತನ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ಜನರ ಹಿತದೃಷ್ಟಿಯಿಂದ ನಿಯಮಗಳಿಗೆ ತಿದ್ದುಪಡಿ ತರುವ ಎಲ್ಲಾ ಅಧಿಕಾರ ಸರ್ಕಾರಕ್ಕಿದೆ. ನಿರ್ಲಕ್ಷ್ಯ ವಹಿಸಿದರೆ ಮನೆ ನಿರ್ಮಿಸಿಕೊಳ್ಳುತ್ತಿರುವ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಒಂದು ವೇಳೆ ಸರ್ಕಾರ ನಿಯಮಗಳನ್ನು ಸಡಿಲಿಸದಿದ್ದರೆ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಹೋರಾಟವನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net