

ಕಡಬ: ಖಾಸಗಿ ಚಾನೆಲ್‌ನ ಸರಿಗಮಪ ಕಾರ್ಯಕ್ರಮದಲ್ಲಿ ಮೋಡಿ ಮಾಡಿದ್ದ ಜ್ಞಾನ ಎಂಬ 5ರ ಹರೆಯದ ಪುಟಾಣಿಯ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಸಂಗೀತ ಲೋಕದಲ್ಲಿ ಮಾಡಿದ ಸಾಧನೆಗಾಗಿ ಈ ಗೌರವ ಲಭಿಸಿದೆ.
ಮೂಲತಃ ಕಡಬ ತಾಲೂಕಿನ ಕೊಂಬಾರು ಕಟ್ಟೆ ಇಡ್ಯಡ್ಕ ಎಂಬಲ್ಲಿನ ನಿವಾಸಿ ಪ್ರಸ್ತುತ ಬೆಂಗಳೂರಿನ ರಾಮನಗರದ ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿರುವ ರೇಖಾ ಹಾಗೂ ಕನಕಪುರ ನಿವಾಸಿ, ಹಿನ್ನೆಲೆ ಗಾಯಕ ಗುರುರಾಜ್ ದಂಪತಿ ಪುತ್ರಿ ಜ್ಞಾನ, ಎಳವೆಯಲ್ಲೇ ಸಂಗೀತ ಲೋಕದಲ್ಲಿ ಛಾಪು ಮೂಡಿಸಿದ್ದರು.
ಎರಡೂವರೆ ವರ್ಷದಲ್ಲೇ ಈಕೆ 10 ಕ್ಲಿಷ್ಟಕರ ಪದ್ಯಗಳನ್ನು ಹಾಡಿದ್ದಳು. ಮೂರನೇ ವರ್ಷದಲ್ಲಿ ಈಕೆಯ ಹೆಸರು ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಸೇರಿತ್ತು. ಈ ಪುಟಾಣಿಗೆ ಮಜಾ ಟಾಕೀಸ್‌ನಲ್ಲಿ ಮೊದಲ ಬಾರಿ ವೇದಿಕೆ ಲಭಿಸಿತ್ತು. ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನಲ್ಲೂ ಪ್ರತಿಭೆ ತೋರಿಸಿದ್ದಳು. ತುಳುನಾಡಿನ ಕಾರುಣಿಕ ದೈವ ಕೊರಗಜ್ಜ ದೈವದ ಆಲ್ಬಮ್ ಸಾಂಗ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಹಾಡಿನಲ್ಲೂ ಜ್ಞಾನ ಹಾಡಿದ್ದಾಳೆ. ರಾಮನಗರ ನಗರಸಭೆಯ ಸ್ವಚ್ಛ ಸರ್ವೇಕ್ಷಣಾ ಸಮಿತಿ ರಾಯಭಾರಿಯೂ ಆಗಿದ್ದಾಳೆ. ಪ್ರತಿಭಾ ಸಿರಿ, ಕಲಾಶ್ರೀ, ಕಲಾಸಂಗಮ ಮೊದಲಾದ 112 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ.
ಈಕೆಯ ಪ್ರತಿಭೆಯನ್ನು ಎಳೆಯ ವಯಸ್ಸಿನಲ್ಲೇ ಗುರುತಿಸಿದೆ. ಸರಿಗಮಪ ವೇದಿಕೆಯಲ್ಲಿ ಅವಕಾಶ ನೀಡಲು ಮೊದಲು ನಿರಾಕರಿಸಿದ್ದರು. ಆದರೆ, ಈಕೆಯ ಪ್ರತಿಭೆ ನೋಡಿ ಅವಕಾಶ ನೀಡಿದ್ದರು. ಸರಿಗಮಪದಲ್ಲಿ ನಿರಂತರ 35 ಪದ್ಯಗಳನ್ನು ಹಾಡಿದ್ದಾಳೆ. - ರೇಖಾ ಗುರುರಾಜ್ ಬಾಲಕಿಯ ತಾಯಿ