

ಹುಬ್ಬಳ್ಳಿ: ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ಹೊಸ ಪಡಿತರ ಚೀಟಿ ವಿತರಣೆ ಹಾಗೂ ತಿದ್ದುಪಡಿ ಮಾಡುವ ವ್ಯವಸ್ಥೆಯನ್ನು ಪುನಃ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಜೈ ಭೀಮ ಯುವ ಶಕ್ತಿ ಸೇನಾ ಆಗ್ರಹಿಸಿದೆ.
ಈ ಕುರಿತು ಸಂಘಟನೆಯು ಪದಾಧಿಕಾರಿಗಳು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಯವರಿಗೆ ಸೋಮವಾರ ಮನವಿ ರವಾನಿಸಿದ್ದಾರೆ.
ಚುನಾವಣೆ ಮುಗಿದು 3 ತಿಂಗಳಾದರೂ ಇಲ್ಲಿಯವರೆಗೂ ಆನ್ಲೈನ್ ಮೂಲಕ ಹೊಸದಾಗಿ ಪಡಿತರ ಚೀಟಿ ಪಡೆಯುವ ಹಾಗೂ ತಿದ್ದುಪಡಿ ಮಾಡುವ ವ್ಯವಸ್ಥೆ ಆರಂಭಿಸಿಲ್ಲ. ಇದರಿಂದ ಬಡವರು ಸರ್ಕಾರಿ ಆಸ್ಪತ್ರೆಯ ಸೌಲಭ್ಯ ಪಡೆಯಲು, ಇತ್ತೀಚೆಗೆ ಮದುವೆಯಾದವರು ತೊಂದರೆ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ತಂದಿರುವ ಜನಪರ ಯೋಜನೆಗಳ ಫಲಾನುಭವಿಗಳಾಗಲೂ ಜನರು ಕಷ್ಟಪಡುತ್ತಿದ್ದಾರೆ ಎಂದು ದೂರಿದೆ.
ಸೇನಾ ಜಿಲ್ಲಾಧ್ಯಕ್ಷ ಹರೀಶ ಗುಂಟ್ರಾಳ, ಸುನೀಲ ಕುರ್ಡೆಕರ, ರಮೇಶ ಹಿರೇಮನಿ, ಅಣ್ಣಪ್ಪ ಸಿದ್ದಾಪುರ, ಗುರುನಾಥ ಮೊರಬದ, ಮಂಜು ಮೆಹರವಾಡೆ, ಶಂಕರ ಕಟ್ಟಿಮನಿ, ಅಜರ್ ಮುಲ್ಲಾ, ಮಂಜು ಚಲವಾದಿ, ಇತರರು ಇದ್ದರು.