

ಕಾರವಾರ :ಮಾಜಾಳಿಯ ಪ್ರಸಿದ್ಧ ರಾಮನಾಥ ದೇವರಿಗೆ ನೂತನ ರಾಮನಾಥೇಶ್ವರ ರಥ ನಿರ್ಮಾಣ ಮಾಡಲಾಗಿದೆ. ಕುಮಟಾದಿಂದ ಸೋಮವಾರ ಆಗಮಿಸಿದ ರಥವನ್ನು ರಾಮನಾಥ ದೇವಸ್ಥಾನ ಆಡಳಿತ ಸಮಿತಿ ಮಕ್ತೇಸರ ರವೀಂದ್ರ ಪವಾರ್ ಅವರ ನೇತೃತ್ವದಲ್ಲಿ ಭಕ್ತರು ಸದಾಶಿವಗಡದಿಂದ ಮೆರವಣಿಗೆಯಲ್ಲಿ ಮಾಜಾಳಿವರೆಗೆ ಕೊಂಡೊಯ್ದರು.
ಪಂಟಲಬಾಗದ ದಿ.ಶಿವಾನಂದ ದತ್ತಾತ್ರೆಯ ಪವಾರ್ ಅವರ ಸ್ಮರಣಾರ್ಥ ಅವರ ಸಹೋದರಿ ಕಿಶೋರಿ ಪವಾರ್ ಈ ರಥವನ್ನು ಕೊಡುಗೆಯಾಗಿ ನೀಡಿದ್ದಾರೆ. ಕುಮಟಾದ ದೇವಿದಾಸ ಶೇಟ್ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಿದ್ದಾರೆ. 7 ಅಡಿ ಎತ್ತರವಿರುವ ರಥವು ಮಹಾಭಾರತದ ಅರ್ಜುನನ ರಥದ ಮಾದರಿಯಲ್ಲಿದ್ದು, ಮುಂದೆ ಕಟ್ಟಿಗೆಯಿಂದಲೇ ನಂದಿಯನ್ನು ಕೆತ್ತಲಾಗಿದೆ. ಜನವರಿ 22 ರಂದು ಸಕಲ ಧಾರ್ಮಿಕ ವಿಧಿಗಳೊಂದಿಗೆ ರಥ ಸಮರ್ಪಣೆ ನಡೆಯಲಿದೆ.