ಯುವಸ್ಪಂದನ ಸಂಚಲನ: ಯುವಶಕ್ತಿಯನ್ನು ದೇಶದ ಆಸ್ತಿಯನ್ನಾಗಿಸಲು ಹೊಸ ಕಾರ್ಯಕ್ರಮ

Youth
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರಾಜ್ಯದ ಯುವ ಸಮುದಾಯವನ್ನು ಸರ್ವವಿಧದಲ್ಲೂ ಸಮಗ್ರ ಹಾಗೂ ಸದೃಢವಾಗಿಸುವ ಮೂಲಕ ದೇಶದ ಆಸ್ತಿಯನ್ನಾಗಿ ರೂಪಿಸುವತ್ತ ಸರ್ಕಾರ ಚಿತ್ತ ಹರಿಸಿದೆ. ಈ ಸಂಬಂಧ ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ನಿಗಾ ವಹಿಸಲು ಯುವ ಸ್ಪಂದನ ಎಂಬ ವಿನೂತನ ಕಾರ್ಯಕ್ರಮವನ್ನು ದೇಶದಲ್ಲೇ ಮೊದಲ ಬಾರಿ ರಾಜ್ಯದಲ್ಲಿ ಜಾರಿಗೊಳಿಸಲು ಮುಂದಾಗಿದೆ. ಯುವ ನೀತಿ ನಂತರದ ಮತ್ತೊಂದು ಪ್ರಯತ್ನ ಇದಾಗಿದೆ. ಯುವ ಸಮುದಾಯಕ್ಕೆ ಲಭ್ಯವಿರುವ ಯೋಜನೆಗಳ ಮಾಹಿತಿ ನೀಡುವ ಯುವ ಕಣಜ ರಚಿಸಲಾಗಿದೆ.

ಏನಿದು ಕಾರ್ಯಕ್ರಮ: 15 ರಿಂದ 29 ವರ್ಷದ ಯುವ ವಯೋಮಾನದವರ ಏಳ್ಗೆ ಗಮನದಲ್ಲಿಟ್ಟುಕೊಂಡು ವಿವಿಧ ಇಲಾಖೆಗಳು ಹತ್ತು ಹಲವು ಕಾರ್ಯಕ್ರಮ ರೂಪಿಸುತ್ತಿವೆ. ಆದರೆ ಅವುಗಳ ಪ್ರಯೋಜನ ಪಡೆಯುವುದು ಯುವಕರಿಗೆ ದುಸ್ತರವಾಗಿದೆ. ಮುಖ್ಯವಾಗಿ ಯಾವ ಇಲಾಖೆಯಲ್ಲಿ ಏನೇನು ಯೋಜನೆಗಳಿವೆ ಎಂಬ ಮಾಹಿತಿಯೇ ಸಿಗುವುದಿಲ್ಲ. ಹೀಗಾಗಿ ಯುವ ಸಮುದಾಯಕ್ಕೆ ಮೀಸಲಾದ ಬಜೆಟ್​ ವೆಚ್ಚವಾಗದೆ ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಇದನ್ನು ತಪ್ಪಿಸಿ ಯುವ ಸಮುದಾಯಕ್ಕೆ ಮೀಸಲಾದ ಅನುದಾನ ಅದೇ ಉದ್ದೇಶಕ್ಕೆ ಬಳಕೆಯಾಗಬೇಕೆಂದು ಯುವ ಸಬಲೀಕರಣ ಇಲಾಖೆ ಯುವ ಸ್ಪಂದನ ಮತ್ತು ಯುವ ಕಣಜ ರೂಪಿಸುತ್ತಿದೆ. ಯುವ ಜನರಿಗಾಗಿ ಯುವ ಜನರು ಎಂಬುದು ಇಡೀ ಯೋಜನೆಯ ಆಶಯವಾಗಿದೆ.

ಇಲಾಖಾವಾರು ಯೋಜನೆ: ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ, ಮೀನುಗಾರಿಕೆ, ಕೌಶಲಾಭಿವೃದ್ಧಿ, ಕೈಗಾರಿಕೆ, ಕಂದಾಯ, ಕೈಮಗ್ಗ, ಅಂಗವಿಕಲರು, ಶಿಕ್ಷಣ, ಸಮಾಜ ಕಲ್ಯಾಣ, ರಾಜ್ಯ ಹಣಕಾಸು ಸಂಸ್ಥೆ, ಕೆಎಸ್​ಆರ್​ಟಿಸಿ, ಎಸ್ಕಾಂಗಳು, ರಾಜೀವ್​ ವಸತಿ ನಿಗಮ, ಸಹಕಾರ, ಗ್ರಾಮೀಣಾಭಿವೃದ್ಧಿ, ಆಯುಷ್​, ಆರೋಗ್ಯ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಅಂಬೇಡ್ಕರ್​ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಇಲಾಖೆ, ಪ್ರವಾಸೋದ್ಯಮ ನಿಗಮ, ನರೇಗಾ, ಲೋಕೋಪಯೋಗಿ, ಯುವ ಸಬಲೀಕರಣ ಇಲಾಖೆಗಳಲ್ಲಿ ಯುವ ಸಮುದಾಯಕ್ಕೆ ಸಂಬಂಧಿಸಿದ ಯೋಜನೆಗಳಿವೆ.

ಸಿದ್ಧವಾಗಿದೆ ಯುವ ನೀತಿ: ಯುವ ಸಮುದಾಯವನ್ನು ಯಾವ ನಿಟ್ಟಿನಲ್ಲಿ ಸಬಲ ಮಾಡಬೇಕೆಂಬ ಬಗ್ಗೆ ಯುವ ನೀತಿಯೂ ಸಿದ್ಧವಾಗಿದೆ. ತಜ್ಞರ ಸಮಿತಿ ನೀಡಿದ್ದ ಶಿಾರಸಿನ ಆಧಾರದಲ್ಲಿ ನೀತಿಯನ್ನು ಅಂತಿಮ ಮಾಡಲಾಗುತ್ತಿದೆ. ಸದ್ಯದಲ್ಲಿ ನೀತಿಯನ್ನು ಬಿಡುಗಡೆ ಮಾಡಲಾಗುತ್ತದೆ.

ಪೋರ್ಟಲ್​ ಸಿದ್ಧ: ಯುವ ಜನರಲ್ಲಿ ಅಕ್ಷರಸ್ಥರು, ಶಿಕ್ಷಣ ಪಡೆಯುವವರು ಮಾತ್ರವಲ್ಲ, ಅನಕ್ಷರಸ್ಥರಿಗೂ ಯೋಜನೆಗಳು ವಿವಿಧ ಇಲಾಖೆಗಳಲ್ಲಿ ಇವೆ. ಅವುಗಳನ್ನು ಹೇಗೆ ಪಡೆಯಬೇಕೆಂಬುದನ್ನು ತಿಳಿಸಲು ಯುವ ಸ್ಪಂದನ ಪೋರ್ಟಲ್​ ವಾರದಲ್ಲಿ ಉದ್ಘಾಟನೆಯಾಗಲಿದೆ. ಯುವ ಕಣಜವನ್ನು ಸಹ ಅದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ. ಯಾವ ಯಾವ ಇಲಾಖೆಯಲ್ಲಿ ಏನೇನು ಲಾಭ ಪಡೆಯಬಹುದು, ಯಾರನ್ನು ಸಂಪರ್ಕಿಸಬೇಕು, ತಮ್ಮ ವಿದ್ಯಾರ್ಹತೆಗೆ ಏನೇನು ಅವಕಾಶಗಳಿವೆ ಸೇರಿದಂತೆ ಸಮಗ್ರ ಮಾಹಿತಿ ಇಲ್ಲಿ ಲಭ್ಯ.

ಕ್ರೀಡೆಗೆ ವಿಶೇಷ ಒತ್ತು: ಯಾವ ದೇಶದಲ್ಲಿ ಕ್ರೀಡೆಗೆ ಒತ್ತು ನೀಡಲಾಗುತ್ತದೆಯೋ ಆ ದೇಶದ ಜಿಡಿಪಿ ಚೆನ್ನಾಗಿರುತ್ತದೆ ಎಂಬ ಮಾತಿದೆ. ಆದ್ದರಿಂದಲೇ ಕ್ರೀಡೆಗೆ ವಿಶೇಷ ಒತ್ತು ನೀಡಲು ಮುಂದಾಗಿರುವುದಾಗಿ ಸರ್ಕಾರ ಹೇಳುತ್ತಿದೆ. ನರೇಗಾದಲ್ಲಿ 504 ಕೋಟಿ ರೂ. ಬಳಸಿಕೊಂಡು ಗ್ರಾಮೀಣ ಭಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.

ಉದ್ದೇಶವೇನು? ಮಗುವಿನ ಬೆಳವಣಿಗೆಯಿಂದ ಹಿಡಿದು ಉದ್ಯೋಗದ ಅವಕಾಶಗಳ ತನಕ ಯೋಜನೆಗಳಿವೆ. ಆದರೆ ಅವುಗಳು ಒಂದಕ್ಕೊಂದು ಪೂರಕವಾಗಿಲ್ಲ. ಯುವ ಸಬಲೀಕರಣ ಇಲಾಖೆ ಮೂಲಕ ಒಂದಕ್ಕೊಂದು ಬೆಸುಗೆ ಹಾಕಿ ಅದರ ಲಾಭ ಅರ್ಹರಿಗೆ ಸಿಗುವಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿದೆ. ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದೆ ಯುವಕರು ಹಾಳಾಗುತ್ತಿದ್ದಾರೆ. ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಯುವಕರನ್ನು ಸರಿಯಾದ ದಾರಿಯಲ್ಲಿ ತರುವ ಮೂಲಕ ಅವರನ್ನು ಕ್ರಿಯಾಶೀಲರನ್ನಾಗಿ ಮಾಡುವುದು ಸರ್ಕಾರದ ಉದ್ದೇಶ.

ಯುವ ಜನರಿಗೆ ಮೀಸಲಾದ ಯೋಜನೆಗಳ ಲ ಅರ್ಹರಿಗೆ ಸಿಗಬೇಕೆಂಬುದು ಒಟ್ಟಾರೆ ಉದ್ದೇಶ. ಅದಕ್ಕಾಗಿ ಸಿದ್ಧಪಡಿಸುತ್ತಿರುವ ಪೋರ್ಟಲ್​ ಯುವಜನೋತ್ಸವದ ದಿನದಂದೇ ಲೋಕಾರ್ಪಣೆ ಮಾಡುತ್ತೇವೆ. ಯೋಜನೆಗಳು ಪರಸ್ಪರ ಪೂರಕವಾಗಿರುವಂತೆ ನೋಡಿಕೊಳ್ಳುತ್ತೇವೆ. | ಡಾ. ಕೆ.ಸಿ. ನಾರಾಯಣಗೌಡ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ

ಮುಖ್ಯಾಂಶಗಳು * ವಿವಿಧ ಇಲಾಖೆಗಳ 504 ಯೋಜನೆಗಳು ಒಂದೆಡೆ ನಿಯಂತ್ರಣ * ಯುವಕರು ದಾರಿ ತಪ್ಪದಂತೆ ಎಚ್ಚರವಹಿಸುವ ಉದ್ದೇಶ * ಯುವ ಬಜೆಟ್​ ಮಂಡಿಸಬೇಕೆಂಬ ಬೇಡಿಕೆಗೆ ಮೊದಲ ಹೆಜ್ಜೆ * ಈ ವಿನೂತನ ಪ್ರಯತ್ನ ದೇಶದಲ್ಲೇ ಮೊದಲು

ಎಸ್​ಸಿಪಿ, ಟಿಎಸ್​ಪಿ ಮಾದರಿ

ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಲಭ್ಯವಾಗುವ ಅನುದಾನವನ್ನು ಅದೇ ವರ್ಗಗಳಿಗೆ ಬಳಸುವುದಕ್ಕೆ ಎಸ್​ಸಿಪಿ, ಟಿಎಸ್​ಪಿ ಕಾನೂನು ತರಲಾಗಿದೆ. ಅದನ್ನು ಸಮಾಜ ಕಲ್ಯಾಣ ಇಲಾಖೆ ಮೂಲಕ ನಿಗಾವಹಿಸಲಾಗುತ್ತಿದೆ. ಆದರೆ ಯುವ ಸಮುದಾಯಕ್ಕೆ ಮೀಸಲಾದ ಯೋಜನೆಗಳ ಲ ಅದೇ ವರ್ಗಕ್ಕೆ ಸಿಗುವಂತೆ ಮಾಡಲು ಕಾನೂನು ತರುವ ಬಗ್ಗೆ ಸರ್ಕಾರ ಇನ್ನೂ ಆಲೋಚಿಸಿಲ್ಲ. ಆದರೆ ಕೇಂದ್ರೀಕೃತ ನಿಗಾ ವ್ಯವಸ್ಥೆ ಮಾಡಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚನೆ ಮಾಡಿ ವರ್ಷಕ್ಕೆ ಎರಡು ಸಭೆ ನಡೆಸಿ ಯುವ ಸಮುದಾಯದ ಯೋಜನೆಗಳ ಜಾರಿ ಬಗ್ಗೆ ಗಮನ ಹರಿಸುವ ಚಿಂತನೆಯೂ ಸರ್ಕಾರದಲ್ಲಿದೆ.

ಯುವ ಬಜೆಟ್​ಗೆ ಬೇಡಿಕೆ

ಮಹಿಳೆ, ಮಕ್ಕಳ ಬಜೆಟ್​ ಮಾದರಿಯಲ್ಲಿಯೇ ಯುವ ಬಜೆಟ್​ ರೂಪಿಸಬೇಕೆಂದು ಯುವ ಸಂಟನೆಗಳು ಸರ್ಕಾರದ ಮೇಲೆ ಆಗಾಗ ಒತ್ತಡ ಹಾಕುತ್ತಲೇ ಬರುತ್ತಿವೆ. ಆದರೆ ಸರ್ಕಾರ ಅಂತಹದೊಂದು ಪ್ರಯತ್ನಕ್ಕೆ ಮುಂದಾಗಿಲ್ಲ. ಆದರೆ ಈಗ ಯುವ ಕಣಜ ಮತ್ತು ಯುವ ಸ್ಪಂದನದ ಮೂಲಕ ಅಂತಹ ಪ್ರಯತ್ನಕ್ಕೆ ಮೊದಲ ಹೆಜ್ಜೆಯನ್ನಿಟ್ಟಿದೆ.

ಎಷ್ಟು ಅನುದಾನ?

ಬಹುತೇಕ ಇಲಾಖೆಗಳಲ್ಲಿ ಯುವ ಜನರಿಗೆ ಸಿಗುವಂತಹ ಒಟ್ಟು ಯೋಜನೆಗಳ ಸಂಖ್ಯೆ 540 ಇವೆ. ಎಲ್ಲ ಇಲಾಖೆಗ ಳಿಂದ ಲಭ್ಯವಾಗುವ ಅನುದಾನವನ್ನು ಲೆಕ್ಕ ಹಾಕಿದರೆ ಅದು 25000 ಕೋಟಿ ರೂಪಾಯಿ ಮೀರುತ್ತದೆ ಎಂಬ ಅಂದಾಜಿದೆ. ಆದರೆ ಅನುದಾನದ ಬಳಕೆ ಮೇಲೆ ಕೇಂದ್ರೀಕೃತ ನಿಗಾ ವ್ಯವಸ್ಥೆ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net