

ಚಿಕ್ಕಮಗಳೂರು: ಪಶ್ಚಿಮಘಟ್ಟದ ಸಾಲಿನಲ್ಲಿರುವ ಮುಳ್ಳಯ್ಯನಗಿರಿ ಪರ್ವತಶ್ರೇಣಿಯಲ್ಲಿ ಹೊಸ ಸಸ್ಯಪ್ರಭೇದ ಕಾಣಿಸಿಕೊಂಡಿದೆ.
ವೈಬಿಯಾ ಜಾತಿಗೆ ಸೇರಿದ ಈ ವಿಶೇಷ ಸಸ್ಯ (ಸೀತಾಳೆ ಹೂವಿನ ಪ್ರಭೇದ) ಮುಳಯ್ಯನಗಿರಿ ಪ್ರದೇಶದಲ್ಲಿ ಸಾಗುವಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾಹನ ಚಾಲಕ ಬಿ.ಮಂಜುನಾಥ್ ಪತ್ತೆ ಮಾಡಿದ್ದಾರೆ.
ದಕ್ಷಿಣ ವಲಯದ ತೇವಾಂಶಭರಿತ ಕಾಡು ಹಾಗೂ ಶೋಲಾ ಅರಣ್ಯ ಪ್ರದೇಶದಲ್ಲಿ ಬೆಳೆಯುವ ಈ ಸಸ್ಯ ಡಿಸೆಂಬರ್‍ನಲ್ಲಿ ಚಿಗುರೊಡೆದು ಫೆಬ್ರವರಿಯಲ್ಲಿ ಹೂವು ಅರಳುತ್ತದೆ. ದೇಶದ ದಕ್ಷಿಣ ಮತ್ತು ಪಶ್ಚಿಮಘಟ್ಟದ ಹೊಸ ಸಸ್ಯ ಇದು. ಸೇಡನ್ ಫಡೇನಿಯಲ್ಲಾ ಸೆಲಿಮಿ ಆರ್ಕಿಡ್ ಜಾತಿಯ ಈ ಸಸ್ಯ ಕೇರಳದ ವೈನಾಡುವಿನಲ್ಲಿ ಒಮ್ಮೆ ಪತ್ತೆಯಾಗಿದ್ದು ಸಸ್ಯ ತಜ್ಞ ಡಾ.ವಿ.ಕೆ.ಜಾರ್ಜ್ ಎಮರಿಟ್ ಈ ಹಿಂದೆ ಪರಿಚಯಿಸಿದ್ದರು.
ಚಾಲಕ ಮಂಜುನಾಥ್ ವಿಶಿಷ್ಟ ಸಸ್ಯ ಅಧ್ಯಯನದ ಬಗ್ಗೆ ಆಸಕ್ತಿ ಹೊಂದಿರುವುದು ಉತ್ತಮ ಹವ್ಯಾಸ ಎಂದು ಗೌರವ ವನ್ಯಜೀವಿ ಪರಿಪಾಲಕ ಜಿ.ವೀರೇಶ್ ತಿಳಿಸಿದ್ದಾರೆ.