

ಬೆಂಗಳೂರು: ಸಚಿವರಾಗಿಯೇ ವಿಧಾನಸೌಧ ಪ್ರವೇಶಿಸುವ ಬಯಕೆ ಹೊತ್ತಿರುವ ಪಕ್ಷಾಂತರಿ ಶಾಸಕರು ಕಾದುಕಾದು ಸಂಯಮ ಕಳೆದುಕೊಳ್ಳಲಾರಂಭಿಸಿದ್ದು, ಮಂತ್ರಿಗಿರಿ ನೀಡದಿದ್ದರೆ, ಫೆ.17ರಂದು ಆರಂಭವಾಗುವ ವಿಧಾನಮಂಡಲ ಅಧಿವೇಶನಕ್ಕೆ ಗೈರಾಗುವ ಎಚ್ಚರಿಕೆ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಸ ಸೂತ್ರ ಸಿದ್ಧಪಡಿಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಬುಧವಾರ ಸಂಪುಟ ಪೂರ್ಣ ಪ್ರಮಾಣದಲ್ಲಿ ವಿಸ್ತರಣೆಯಾಗುವುದು ನಿಶ್ಚಿತ.
ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಸಚಿವ ಸ್ಥಾನ ಕಲ್ಪಿಸಬೇಕೆಂಬುದು ಸಿಎಂ ಯಡಿಯೂರಪ್ಪ ಅವರ ಇಚ್ಛೆಯಾಗಿದೆ. ಇದಕ್ಕಾಗಿಯೇ ಅವರು 9:7 ಅನುಪಾತದ ಸೂತ್ರ ಸಿದ್ಧಪಡಿಸಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದವರಿಗೆ 9, ಪಕ್ಷದವರಿಗೆ 7 ಸಚಿವ ಸ್ಥಾನ ಹಂಚಬೇಕೆಂಬುದು ಈ ಸೂತ್ರದ ಸಾರ.
ಈ ಪ್ರಸ್ತಾಪವನ್ನು ಈಗಾಗಲೇ ಅವರು ವರಿಷ್ಠರ ಮುಂದಿಟ್ಟಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಈ ಬಗ್ಗೆ ರ್ಚಚಿಸಿ ಒಪ್ಪಿಗೆ ನೀಡುವುದಷ್ಟೇ ಬಾಕಿಯಿದೆ. ವರಿಷ್ಠರ ಸಮ್ಮತಿ ನಿರೀಕ್ಷೆಯಲ್ಲಿ ಅಗತ್ಯ ಸಿದ್ಧತೆಗಳು ಕೂಡ ಆರಂಭವಾಗಿದೆ. ಈ ಬಾರಿಯ ವಿಸ್ತರಣೆ ಪೂರ್ಣ ಪ್ರಮಾಣದ್ದಾಗಿರಲಿದ್ದು, ಎಲ್ಲ 16 ಸ್ಥಾನಗಳು ಭರ್ತಿಯಾಗಲಿವೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಒಪ್ಪದಿದ್ದರೆ ದೆಹಲಿಗೆ: ಪರಿಷ್ಕೃತ ಪಟ್ಟಿಗೂ ವರಿಷ್ಠರು ಅಸ್ತು ಎನ್ನದಿದ್ದರೆ ಸಿಎಂ ದೆಹಲಿಗೆ ತೆರಳಲಿದ್ದಾರೆ. ಹೊಸ ಶಾಸಕರು ಸವಾಲೆಸೆಯುವ ಪರಿಸ್ಥಿತಿ ಸೃಷ್ಟಿಯಾದರೆ ಪಕ್ಷ ಹಾಗೂ ಸರ್ಕಾರಕ್ಕೂ ಮುಜುಗರ. ಗೆದ್ದ 24 ತಾಸಿನಲ್ಲಿ ಮಂತ್ರಿ ಮಾಡುವ ವಾಗ್ದಾನದಿಂದ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಎಲ್ಲ ರೀತಿಯಿಂದಲೂ ಕಷ್ಟವೆಂದು ವರಿಷ್ಠರಿಗೆ ನಿವೇದಿಸಿ ವಿಸ್ತರಣೆಗೆ ಒಪ್ಪಿಸಲು ಸಿಎಂ ಯೋಚಿಸಿದ್ದಾರೆನ್ನಲಾಗಿದೆ.
ಮೊದಲು ನಮಗೆ
ಉಪಚುನಾವಣೆಯಲ್ಲಿ ಸೋತವರಿಗೂ ಮಂತ್ರಿ ಸ್ಥಾನ ಕೊಡಬೇಕೆಂದು ಪಟ್ಟು ಹಿಡಿದಿದ್ದ ಅರ್ಹ ಶಾಸಕರು ಈ ವಿಚಾರದಲ್ಲೀಗ ಮೌನವಾಗಿದ್ದಾರೆ. ಒಂದೊಮ್ಮೆ ಈ ಪಟ್ಟು ಮುಂದುವರಿಸಿದರೆ ತಮಗೂ ಸಿಗುವುದು ತಡವಾಗಲಿದೆ ಎಂದರಿತು ವರಸೆ ಬದಲಿಸಿ ‘ಮೊದಲು ನಮಗೆ ಸಚಿವ ಸ್ಥಾನ ಕೊಟ್ಟರೆ ಸಾಕು, ಮುಂದೆ ನೋಡೋಣ’ ಎಂಬ ತೀರ್ವನಕ್ಕೆ ಬಂದಿದ್ದಾರೆ. ಹೀಗಾಗಿ ಎಚ್.ವಿಶ್ವನಾಥ್ ಹಾಗೂ ಎಂ.ಟಿ.ಬಿ.ನಾಗರಾಜ್ ಪರ ಅರ್ಹರ ದನಿ ಕ್ಷೀಣಿಸಿದೆ.
ತಾತ್ಕಾಲಿಕ ಉಪಶಮನ
ಪರಸ್ಪರ ಒತ್ತಡ ತಂತ್ರ ನಿವಾರಣೆಗಾಗಿ ತಕ್ಷಣ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಇದೊಂದು ತಾತ್ಕಾಲಿಕ ಉಪ ಶಮನವಾಗಿರಲಿದೆ. ಜೂನ್ನಲ್ಲಿ ಸಂಪುಟ ಪುನಾರಚನೆಯಾಗಲಿದೆ. ‘ತ್ಯಾಗ’ ಮಾಡಿದ ಎಲ್ಲರಿಗೂ ಅವಕಾಶ ಕಲ್ಪಿಸುವುದು ಹಾಗೂ ಸಚಿವ ಸ್ಥಾನ ಅನುಭವಿಸಿದ ಪಕ್ಷ ಮೂಲದವರನ್ನು ಕೈಬಿಟ್ಟು ಹೊಸಬರಿಗೆ ಆದ್ಯತೆ ನೀಡುವ ಚಿಂತನೆಯಿದೆ ಎಂದು ಮೂಲಗಳು ಹೇಳಿವೆ.
ಬಿಗಿಪಟ್ಟು
ಕಾದು ನೋಡುವ ತಂತ್ರ ಕೈಬಿಟ್ಟ ಪಕ್ಷಾಂತರಿ ಶಾಸಕರು ಇದೀಗ ಪಟ್ಟು ಬಿಗಿಗೊಳಿಸಿ ದ್ದಾರೆ. ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೆ ಈ ವರ್ಷದ ಮೊದಲ ವಿಧಾನಮಂಡಲ ಅಧಿವೇಶನದಿಂದ ದೂರ ಉಳಿಯುವ ಚಿಂತನೆ ನಡೆಸಿದ್ದಾರೆ. ಬಿಎಸ್ವೈ ಅವರನ್ನು ಪ್ರತ್ಯೇಕವಾಗಿ ಭೇಟಿಯಾದ ಸಂದರ್ಭದಲ್ಲಿ ತಮ್ಮ ಈ ಮನದಿಂಗಿತವನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ.
ಈ ಕಾರಣಕ್ಕಾಗಿಯೇ ಹೊಸ ಬಿಕ್ಕಟ್ಟಿನ ತೀವ್ರತೆ ಅರಿತ ಬಿಎಸ್ವೈ 9:7 ಅನುಪಾತದಲ್ಲಿ ಸಚಿವ ಸ್ಥಾನ ಹಂಚಿಕೆ ಸೂತ್ರ ಸಿದ್ಧಪಡಿಸಿ, ಉಳಿದ ಇಬ್ಬರಿಗೆ ನಿಗಮ/ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಿದ್ದಾರೆ. ಸೋತ ಇಬ್ಬರು ಹಾಗೂ ಆರ್.ಶಂಕರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನವೊಲಿಸುವ ವಿಶ್ವಾಸ ಸಿಎಂ ಅವರಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಯಡಿಯೂರಪ್ಪ ಲೆಕ್ಕಾಚಾರ
ಅರ್ಹರ ತಂತ್ರಗಾರಿಕೆಯೇನು?