ಜೀವನದಲ್ಲಿ ಅಂಕ ಗಳಿಕೆಯೇ ಅಂತಿಮವಲ್ಲ

11 Dwd 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿದ್ಯಾರ್ಥಿಗಳ ಪ್ರತಿಭೆಗೆ ಮನ್ನಣೆ ಸಿಕ್ಕರೆ ಅವರ ಪರಿಶ್ರಮ ಸಾರ್ಥಕವಾಗುತ್ತದೆ. ಜೀವನದಲ್ಲಿ ಕೇವಲ ಅಂಕ ಗಳಿಕೆ ಮಾತ್ರ ಅಂತಿಮವಲ್ಲ. ಪಠ್ಯವನ್ನು ಹೊರತುಪಡಿಸಿ ವಿದ್ಯಾರ್ಥಿಗಳಲ್ಲಿನ ಕೌಶಲವನ್ನು ಹೊರತರುವ ಪ್ರಯತ್ನವಾಗಬೇಕು ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದರು.

ನಗರದ ವಿದ್ಯಾಗಿರಿಯ ಜೆಎಸ್‌ಎಸ್ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಧಾರವಾಡ ಜೈನ ಮಿಲನದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೇವಲ ಓದಿನಿಂದ ಸಾಧನೆ ಅಲ್ಲ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಹಾಡುಗಾರಿಕೆ, ನೃತ್ಯದಂಥ ಹವ್ಯಾಸಗಳು ಮಕ್ಕಳ ಭವಿಷ್ಯ ರೂಪಿಸಬಲ್ಲವು. ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ವೇಳಾಪಟ್ಟಿ ಹಾಕಿಕೊಳ್ಳಬೇಕು. ಹಿರಿಯರಿಗೆ ಗೌರವ ಕೊಡುವುದನ್ನು, ಜೀವನದಲ್ಲಿ ಶಿಸ್ತು, ಸಂಯಮವನ್ನು ರೂಢಿಸಿಕೊಳ್ಳಬೇಕು. ಇದು ವಿದ್ಯಾರ್ಥಿಗಳನ್ನು ಸಾಧನೆಯ ಉತ್ತುಂಗಕ್ಕೆ ಏರಿಸಬಲ್ಲದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಂತರಾಜ ಮಲ್ಲಸಮುದ್ರ ಮಾತನಾಡಿ, ಜೈನ ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವ ಕೆಲಸ ಯುವಕರಿಂದ ಆಗಬೇಕಾಗಿದೆ. ವಿದ್ಯಾರ್ಥಿಗಳು ನಯ, ವಿನಯದೊಂದಿಗೆ ಸಂಸ್ಕಾರ ಭರಿತ ಶಿಕ್ಷಣ ಪಡೆಯಬೇಕು ಎಂದರು.

ಇದೇವೇಳೆ ವಾಣಿ ಪ್ರಸಾದ ಮತ್ತು ಡಾ. ಅಜಿತ ಪ್ರಸಾದ ಅವರನ್ನು ಸನ್ಮಾನಿಸಲಾಯಿತು. ಡಾ. ಸೂರಜ್ ಜೈನ್ ಸ್ವಾಗತಿಸಿದರು. ರಾಜೇಶ್ವರಿ ಶೆಟ್ಟಿ ಸ್ವಾಗತಿಸಿದರು. ಸುಜಾತಾ ಹಡಗಲಿ, ಸಂಗೀತಾ ಉಪಾಧ್ಯೆ, ಮಹಾವೀರ ಉಪಾಧ್ಯೆ, ಜಿನದತ್ತ ಹಡಗಲಿ, ಜಿನ್ನಪ್ಪ ಕುಂದಗೊಳ, ರತ್ನಾಕರ ಹೊಳಗಿ, ಮೋಹನಕುಮಾರ ಗೋಗಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net